ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕಳೆದ 2 ವರ್ಷದ ಹಿಂದೆಯೇ ದುಂಡಳ್ಳಿ, ಬಿಳಹ, ಯಸಳೂರು ರಸ್ತೆ ಅಗಲಿಕರಣ ಕಾಮಗಾರಿ ಪ್ರಾರಂಭಗೊಂಡಿದ್ದರೂ ಅರಣ್ಯ ಇಲಾಖೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸದಿರುವ ಹಿನ್ನಲೆ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಶನಿವಾರ ಗ್ರಾಮಸ್ಥರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಂತರ ರಸ್ತೆ ತಡೆ ಮಾಡಲಾಗುವುದು ಎಂದು ದುಂಡಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ಯು.ಸುಬ್ರಮಣಿ ಎಚ್ಚರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರಸಂತೆಯಿಂದ ದುಂಡಳ್ಳಿ, ಬಿಳಹ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ 9 ಕಿ.ಮೀ. ಉದ್ದದ ರಸ್ತೆ ಅಗಲಿಕರಣ ಕಾಮಗಾರಿಗೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಲಾಗಿತು ಆದರೆ ರಸ್ತೆ ಅಗಲಿಕರಣ ಸಂದರ್ಭ ರಸ್ತೆ ಬದಿಯಲ್ಲಿರುವ ಮತ್ತು ಖಾಸಗಿಯವರ ತೋಟದ ಬೇಲಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಅಗತ್ಯ ಇದ್ದ ಹಿನ್ನೆಲೆಯಲ್ಲಿ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಗೆದಾರರು ಮರಗಳನ್ನು ತೆರವುಗೊಳಿಸುವಂತೆ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರು. ಮನವಿ ಸ್ಪಂದಿಸಿದ ಅಧಿಕಾರಿಗಳು ಶೀಘ್ರದಲ್ಲಿ ಮರಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು ಆದರೆ ಭರವಸೆ ನೀಡಿ ಎರಡು ವರ್ಷಗಳಾಗುತ್ತಿದ್ದರೂ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಗುತ್ತಿಗೆದಾರರು ಸುಮಾರು ಮೂರು ಕಿ.ಮೀ.ದೂರದ ವರೆಗೆ ರಸ್ತೆ ಅಗಲಿಕರಣ ಕಾಮಗಾರಿ ಮಾಡಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸದಿರುವ ಕಾರಣದಿಂದ ರಸ್ತೆ ಅಗಲಿಕರಣ ಕಾಮಗಾರಿಗೆ ಮರಗಳು ಅಡ್ಡಿಯಾಗಿರುವುದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದರು.ಈ ಸಂಬಂಧ ಹಲವಾರು ಬಾರಿ ಗ್ರಾಮಸ್ಥರು ರಸ್ತೆ ಕಾಮಗರಿ ವಿಳಂಬದಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಗಳನ್ನು ತೆರವುಗೊಳಿಸುವಂತೆ ಮನವಿ ನೀಡಿದ್ದೇವೆ. ಅಲ್ಲದೆ ಈ ಸಂಬಂಧ ತಹಸೀಲ್ದಾರ್‌ಗೂ ಮನವಿ ನೀಡಿದ್ದೇವೆ. ಆದರೂ ಅರಣ್ಯ ಇಲಾಖೆ ಮರ ತೆರವುಗೊಳಿಸುತ್ತಿಲ್ಲ ಎಂದರು.
ಸಾರ್ವಜನಿಕರಿಗೆ ತೊಂದರೆ:ಈಗ ನಡೆಸಲಾಗಿರುವ ರಸ್ತೆ ಕಾಮಗಾರಿಯಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವ ಸ್ಥಳೀಯ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿಗೆ ಗ್ರಾಮಸ್ಥರಿಗೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೆ ಹೊಣೆಯಾಗಿದ್ದಾರೆ. ಶನಿವಾರ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ನಂತರ ರಸ್ತೆ ತಡೆ ಮಾಡಲಾಗುತ್ತದೆ ಎಂದರು.
ದುಂಡಳ್ಳಿ ರೈತ ಡಿ.ಎಲ್.ಯತೀಶ್ ಮಾತನಾಡಿ, ರಸ್ತೆ ಅಗಲಿಕರಣ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಿದ್ದರೆ ರಸ್ತೆ ಅಗಲಿಕರಣ ಕಾಮಗಾರಿ ಪೂರ್ಣಗೊಂಡಿರುತ್ತಿತ್ತು ಎಂದ ಅವರು, ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ರಸ್ತೆ ಅಗಲಿಕರಣ ಕಾಮಗಾರಿಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.ಗೋಷ್ಠಿಯಲ್ಲಿ ರೈತ ಡಿ.ಸಿ.ಶಂಭಿಲಿಂಗಪ್ಪ, ದೊಡ್ಡ ಬಿಳಹದ ರೈತ ಕೆ.ಕೆ.ನಾಗೇಶ್ ಹಾಜರಿದ್ದರು.