ಸಾರಾಂಶ
ಚಳ್ಳಕೆರೆ: ಗ್ರಾಮೀಣ ಭಾಗಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಲಾಭದತ್ತ ಮುನ್ನಡೆಯಬೇಕು. ಹಾಲು ಉತ್ಪಾದನೆ ಮತ್ತು ಮಾರಾಟ ರೈತರಿಗೆ ವರದಾನವಾಗಿದೆ. ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಹಾಲು ಒಕ್ಕೂಟಕ್ಕೆ ಹರಿದುಬರುತ್ತಿದ್ದು, ಎಲ್ಲರೂ ಶಿವಮೊಗ್ಗ ಹಾಲು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಹೇಳಿದರು.
ಸಿದ್ದಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡ ನಿರ್ಮಾಣಕ್ಕಾಗಿ ಶಿವಮೊಗ್ಗ ಹಾಲು ಒಕ್ಕೂಟ ನಿಧಿಯಿಂದ ಮೊದಲ ಕಂತಿನ ರೂಪದಲ್ಲಿ ೨ ಲಕ್ಷದ ಚೆಕನ್ನು ಒಕ್ಕೂಟದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿಗೆ ಹಸ್ತಾಂತರಿಸಿ ಮಾತನಾಡಿದರು.ಪ್ರಸ್ತುತ ಗ್ರಾಮದಲ್ಲಿ ನೂತನ ಕಟ್ಟಡವನ್ನು ವಿಸ್ತಾರವಾಗಿ ನಿರ್ಮಾಣ ಮಾಡುತ್ತಿರುವುದು ಸಂತಸತಂದಿದೆ. ಇನ್ನೂ ಹೆಚ್ಚು ಅನುದಾನ ನೀಡುವ ಬಗ್ಗೆ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸುವೆ ಎಂದು ಭರವಸೆ ನೀಡಿದ ಅವರು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರನ್ನು ಅಭಿನಂದಿಸಿದರು.
ಹಾಲು ಒಕ್ಕೂಟದ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಮಾತನಾಡಿ, ಶಿವಮೊಗ್ಗ ಹಾಲು ಒಕ್ಕೂಟ ಒಳ್ಳೆಯ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಾರಂಭದ ಹಂತದಲ್ಲಿ ಗ್ರಾಮದಲ್ಲಿ ನಿರ್ಮಿಸುವ ಕಟ್ಟಡಕ್ಕೆ ೨ ಲಕ್ಷ ಹಣವನ್ನು ಚೆಕ್ ಮೂಲಕ ನೀಡಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, ಪಾಧಿಕಾರಿಗಳನ್ನು ಸಂಘದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿ ಎಸ್.ಜಿ.ಕೃಷ್ಣಕುಮಾರ್, ಕಾರ್ಯದರ್ಶಿ ಎನ್.ವೀರೇಶ್, ಉಪಾಧ್ಯಕ್ಷ ಟಿ.ಸಿದ್ದೇಶ್, ಸದಸ್ಯರಾದ ಎನ್.ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಎಚ್.ತಿಪ್ಪೇಸ್ವಾಮಿ, ಗ್ರಾಮದ ಮುಖಂಡರಾದ ಮೇಘನಾಥ, ತಿಪ್ಪೇರುದ್ರಪ್ಪ, ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.