ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.75ರಷ್ಟು ಸಮಗ್ರ ಫಲಿತಾಂಶ ಬಂದಿದ್ದು, ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಬಗ್ಗೆ ಹಾಗೂ ಸಿ (ಸಿ) ಹಾಗೂ ಎನ್ಸಿ (ಎನ್ಸಿ - ನಾಟ್ ಕಂಪ್ಲೀಟೆಡ್) ವಿದ್ಯಾರ್ಥಿಗಳ ಶೇಕಡವಾರು ಪಟ್ಟಿಯನ್ನು ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ಮುಖ್ಯೋಪಾಧ್ಯಾಯರೊಂದಿಗೆ ಸಭೆ । ಕಡಿಮೆ ಫಲಿತಾಂಶ ಬಂದ ಶಾಲೆಗಳತ್ತ ನಿಗಾಕ್ಕೆ ಜಿ.ಎಂ.ಗಂಗಾಧರ ಸ್ವಾಮಿ ಸೂಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.75ರಷ್ಟು ಸಮಗ್ರ ಫಲಿತಾಂಶ ಬಂದಿದ್ದು, ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಬಗ್ಗೆ ಹಾಗೂ ಸಿ (ಸಿ) ಹಾಗೂ ಎನ್ಸಿ (ಎನ್ಸಿ - ನಾಟ್ ಕಂಪ್ಲೀಟೆಡ್) ವಿದ್ಯಾರ್ಥಿಗಳ ಶೇಕಡವಾರು ಪಟ್ಟಿಯನ್ನು ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಶುಕ್ರವಾರ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸುವ ಸಂಬಂಧ ಮುಖ್ಯೋಪಾಧ್ಯಾಯರೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆ ಬಿಟ್ಟಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಪರೀಕ್ಷೆ ಬರೆಸಲು ಕ್ರಮವಹಿಸಬೇಕು, ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಲ್ಲಿ ಬೆಳಗ್ಗೆ 9 ರಿಂದ 10 ಗಂಟೆವರೆಗೆ ವಿಶೇಷ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ತರಬೇತಿ ನೀಡಬೇಕು. ಡಿಡಿಪಿಐ ಹಂತದಲ್ಲಿ ಹೊಸ ಸಾಫ್ಟ್ವೇರ್ ರೂಪಿಸಲಾಗಿದ್ದು, 1ನೇ ಕಿರುಪರೀಕ್ಷೆಯಿಂದ ಹಿಡಿದು ಎಲ್ಲ ಪರೀಕ್ಷೆಗಳ ಅಂಕಗಳನ್ನು ಆನ್ಲೈನ್ ನಲ್ಲಿ ದಾಖಲಿಸಿ, ವಿದ್ಯಾರ್ಥಿಗಳ ಪ್ರಗತಿಯನ್ನು ಪ್ರತಿ ಹಂತದಲ್ಲೂ ಪರಿಶೀಲಿಸುವಂತೆ ಸೂಚನೆ ನೀಡಿದರು.ರಾಜ್ಯದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಎಲ್ಲ ಶಾಲೆಗಳಲ್ಲಿ ಮ್ಯಾಕ್ರೋ ಪ್ಲಾನ್ (ಮೂಲ ಯೋಜನೆ) ರೂಪಿಸಿ ಅನುಷ್ಠಾನಕ್ಕೆ ಅಧಿಕಾರಿಗಳು ಸೂಚಿಸಿದರು.
ದಾಖಲಾತಿ ಮತ್ತು ಫಲಿತಾಂಶಗಳಲ್ಲಿ ಹಿಂದುಳಿದಿರುವ ಶಾಲೆಗಳ ಮುಖ್ಯಸ್ಥರು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು. ತರಗತಿಗೆ ಬಾರದ ಮಕ್ಕಳನ್ನು ಪ್ರತ್ಯೇಕವಾಗಿ ಗುರುತಿಸಿ, ಅವರಿಗೆ ವಿಶೇಷ ಆಸಕ್ತಿ ತೋರಿಸಿ ಬೋಧನೆ ಮಾಡಿ, ಶಾಲೆಗಳಲ್ಲಿ ಮೈಕ್ರೋ ಪ್ಲಾನ್ ಅಳವಡಿಸುವುದರ ಜೊತೆಗೆ ಜಾಣ ಮಕ್ಕಳೊಂದಿಗೆ ಇತರೆ ಮಕ್ಕಳನ್ನು ಜೋಡಿ ಮಾಡಿ (ಬಡ್ಡಿ ಪೇರಿಂಗ್) ಕಲಿಕಾ ಮಟ್ಟವನ್ನು ಸುಧಾರಿಸಿ ಎಂದರು.ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ''''ಡ್ಯೂಟಿ ಟೀಚರ್'''' ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಗತಿಯನ್ನು ಪರಿಶೀಲಿಸಬೇಕು ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸಂಜೆ ಅಥವಾ ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಹಿನ್ನಡೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ತುಂಬಿ, ಉತ್ತಮ ಅಂಕಗಳಿಸಲು ಪ್ರೋತ್ಸಾಹ ನೀಡಬೇಕು ಎಂದರು.
ಸಂಕೀರ್ಣ ವಿಷಯಗಳಾದ ವಿಜ್ಞಾನದ ಸೈಕಲ್ಗಳು (ಉದಾ: ಕಾರ್ಬನ್ ಸೈಕಲ್) ಕೇವಲ ಓದಿದರೆ ಅರ್ಥವಾಗದ ಕಾರಣ, ಯೂಟ್ಯೂಬ್ ವಿಡಿಯೋಗಳನ್ನು ತರಗತಿಗಳಲ್ಲಿ ತೋರಿಸಿ ಸುಲಭವಾಗಿ ಮನವರಿಕೆ ಮಾಡಿಕೊಡಬೇಕು, ಪರೀಕ್ಷೆಯಲ್ಲಿ ಅಂಕ ಗಳಿಸಲು ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಫ್ಲೋ ಚಾರ್ಟ್ ಹಾಗೂ ರೇಖಾಚಿತ್ರಗಳನ್ನು (ಡಯಾಗ್ರಮ್) ಬಿಡಿಸುವ ಅಭ್ಯಾಸವನ್ನು ಕಡ್ಡಾಯವಾಗಿ ಮಾಡಿಸುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಇತರರು ಉಪಸ್ಥಿತರಿದ್ದರು.
- - --14ಕೆಡಿವಿಜಿ43: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಯಿತು.