ಶಿರಹಟ್ಟಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ ಮಾಡುವುದು ಅತ್ಯಂತ ಮುಖ್ಯವಾದ ವಿಷಯ. ಬಡ ಮಕ್ಕಳಿಗೆ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರಡಿ ತಿಳಿಸಿದರು.ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್‌ನಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಶಾಲೆಯು ಸಮುದಾಯದ ಒಂದು ಭಾಗವಾಗಿದ್ದು, ಭಾಗೀದಾರರು ಹಾಗೂ ಪೋಷಕರ ವಿಶ್ವಾಸ ಮತ್ತು ಸಹಕಾರವು ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಅರ್ಹ ವಯೋಮಾನದ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ ನಿರಂತರವಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯ ಎಂದರು.ಮಕ್ಕಳ ಕಲಿಕೆಯು ಶಾಲೆ, ಮನೆ ಮತ್ತು ಸಮಾಜಗಳ ನಡುವೆ ನಿರಂತರ ಸಂಪರ್ಕವನ್ನು ಕಲ್ಪಿಸುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಾಲೆಗಳು ನಾಡಿನ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ದೇಗುಲಗಳಾಗಿವೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯ್ಕ ಮಾತನಾಡಿದರು. ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಇಸಿಒ, ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಇದ್ದರು. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಜನರ ಸಹಭಾಗಿತ್ವ ಅವಶ್ಯ
ಲಕ್ಷ್ಮೇಶ್ವರ: ಮಗುವಿನ ಶಿಕ್ಷಣದಲ್ಲಿ ಮಗು, ಪಾಲಕ, ಶಿಕ್ಷಕ ಮತ್ತು ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಸಾರ್ವಜನಿಕರ ಸಹಭಾಗತ್ವದಲ್ಲಿ ಶಿಕ್ಷಣ ಇಲಾಖೆಯು ಮಹತ್ತರ ಬದಲಾವಣೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ತಿಳಿಸಿದರು.ಗುರುವಾರ ಸಮೀಪದ ಶಿಗ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ಉಚಿತವಾಗಿ ನೀಡಿದ 2750 ಊಟದ ತಟ್ಟೆ ಹಾಗೂ 2750 ಕುಡಿಯುವ ನೀರಿನ ಸ್ಟೀಲಿನ ಬಾಟಲ್ ವಿತರಿಸಿ ಮಾತನಾಡಿದರು.ಶಿಕ್ಷಣ ಇಲಾಖೆಯ ಜತೆ ಸಾರ್ವಜನಿಕ ಸಹಭಾಗಿತ್ವದ ಕಂಪನಿಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದು ಹೇಳಿದ ಅವರು, ದಾನಿಗಳು ಕೊಡಮಾಡುವ ಶಾಲಾ ಪರಿಕರಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳವಣಿಗೆ ಹಾಗೂ ಭವಿಷ್ಯದ ಬೆಳವಣಿಗೆ ಮಾಡಿಕೊಳ್ಳಲು ಸಾಧ್ಯವೆಂದರು.ಸಮಾರಂಭದ ಸಾನ್ನಿಧ್ಯವನ್ನು ಹೂವಿನಶಿಗ್ಲಿಯ ಚನ್ನವೀರ ಸ್ವಾಮಿಗಳು ವಹಿಸಿದ್ದರು. ನೋವೆಲ್ ಕಂಪನಿಯ ದೀಪಕ್, ಬಿಇಒ ಎಚ್.ಎನ್. ನಾಯಕ್, ರಾಮಣ್ಣ ಬೂದಿಹಾಳ, ಬಿ.ಎಸ್. ಹರ್ಲಾಪುರ, ಶರಣಬಸನವಗೌಡ ಪಾಟೀಲ, ಪ್ರಧಾನ ಗುರುಮಾತೆ ಎನ್.ವಿ. ಕುಲಕರ್ಣಿ. ಮಂಜುನಾಥ್ ಬದಿ, ಎಸ್.ಬಿ. ಅಣ್ಣಿಗೇರಿ, ತಿಪ್ಪಾ ನಾಯಕ್, ಆದೇಶ ಹುಲಗೂರ, ವಿರುಪಾಕ್ಷಪ್ಪ ಶಿರಹಟ್ಟಿ, ಆರ್.ಡಿ. ಕಲಾಗಯರ, ದೀಪಾ ಬಸ್ಮಿ, ಜ್ಯೋತಿ ಗಾಯಕವಾಡ, ಮಾಲಂಬಿ ಗುತ್ತಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.