ರೈತರ ಹಿತ ಕಾಯುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ: ಸೋಮಲಿಂಗಪ್ಪ ಬಳಿಗೇರ

| Published : Feb 17 2025, 12:34 AM IST

ಸಾರಾಂಶ

ರೈತರಿಗೆ ತಲುಪಬೇಕಾದ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ಕಾರ್ಯವಾಗಲಿ ಎಂದು ಕೃಷಿಕ ಸಮಾಜದ ಅಧ್ಯಕ್ಷ ಸೋಮಲಿಂಗಪ್ಪ ಬಳಿಗೇರ ಹೇಳಿದರು.

ನವಲಗುಂದ: ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆಯಲ್ಲಿ ತಾಲೂಕಿನ ರೈತರಿಗೆ ತೊಂದರೆಯಾಗದಂತೆ ರೈತರ ಹಿತ ಕಾಯುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ. ರೈತರಿಗೆ ತಲುಪಬೇಕಾದ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ಕಾರ್ಯವಾಗಲಿ ಎಂದು ಕೃಷಿಕ ಸಮಾಜದ ಅಧ್ಯಕ್ಷ ಸೋಮಲಿಂಗಪ್ಪ ಬಳಿಗೇರ ಹೇಳಿದರು.

ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2024- 25ನೇ ಸಾಲಿನ ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಕ್ರಮ ವಹಿಸಿ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗೈರಾಗುವ ಮೂಲಕ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸಿಗದಿರುವ ದೂರು ಪದೇ ಪದೇ ಕೇಳಿ ಬರುತ್ತಿವೆ. ಇದನ್ನು ಸಹಿಸಲಾಗದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, 2023-24ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿ ದಾಖಲಾದ ಬೆಳೆ ಹಾಗೂ ಬೆಳೆ ವಿಮೆ ಮಾಡಿಸಿದ ಬೆಳೆಯು ಹೊಂದಾಣಿಕೆಯಾಗದೇ ವಿಮಾ ಸಂಸ್ಥೆಯವರಿಂದ ತಿರಸ್ಕೃತಗೊಂಡಿವೆ. ಅಂತಹ ಬೆಳೆವಿಮಾ ಪ್ರಸ್ತಾವನೆಗಳ ಪಟ್ಟಿಯನ್ನು ಗ್ರಾಪಂ, ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ. ಸಂಬಂಧಪಟ್ಟ ರೈತರು ಅಕ್ಷೇಪಣೆಗಳಿದ್ದಲ್ಲಿ ಫೆ. 28ರೊಳಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಮರ್ಪಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಿದರು.

ಕೃಷಿಕ ಸಮಾಜಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ಅಧಿಕಾರಿಗಳು ಪಾಲ್ಗೊಂಡಿದ್ದರು.