ವಿಶಾಲ ಭೂ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ಸುಮಾರು ೪೯೫ಕ್ಕೂ ಅಧಿಕ ಗ್ರಾಮಗಳಿದ್ದು ಇದರಲ್ಲಿ ೨೧೯ ಕಂದಾಯ ಗ್ರಾಮಗಳಿವೆ. ತಾಲೂಕು ಕೇಂದ್ರದಿಂದ ಸುಮಾರು ೬೦ರಿಂದ ೮೦ ಕಿ.ಮೀ. ದೂರದವರೆಗೆ ತಾಲೂಕು ವ್ಯಾಪ್ತಿ ವಿಸ್ತರಿಸಿದ್ದು ಇಷ್ಟು ದೂರದಿಂದ ಕಂದಾಯ ಇಲಾಖೆಯ ಕೆಲಸಕ್ಕಾಗಿ ವಾರಗಳ ಕಾಲ ನಿತ್ಯ ಆಗಮಿಸಿದರು ಯಾವುದೇ ಪ್ರಯೋಜವಾಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿಗೆ ನೌಕರರು ತೋರುತ್ತಿರುವ ಅಸಹಕಾರದ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಸ್ವತಃ ತಹಸೀಲ್ದಾರ್ ಸುಪ್ರೀತಾ ಸಹ ಕಡತಗಳ ವಿಲೇವಾರಿಗೆ ನಿರ್ಲಕ್ಷ್ಯ ತೋರುತ್ತಿದ್ದು ಸಲ್ಲದ ಕಾರಣ ನೀಡಿ ಕಡತಗಳನ್ನು ವಾಪಸ್ಸು ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಹನೆ ಸಾರ್ವಜನಿಕವಲಯದಿಂದ ಕೇಳಿಬರುತ್ತಿದೆ.ವಿಶಾಲ ಭೂ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ಸುಮಾರು ೪೯೫ಕ್ಕೂ ಅಧಿಕ ಗ್ರಾಮಗಳಿದ್ದು ಇದರಲ್ಲಿ ೨೧೯ ಕಂದಾಯ ಗ್ರಾಮಗಳಿವೆ. ತಾಲೂಕು ಕೇಂದ್ರದಿಂದ ಸುಮಾರು ೬೦ರಿಂದ ೮೦ ಕಿ.ಮೀ. ದೂರದವರೆಗೆ ತಾಲೂಕು ವ್ಯಾಪ್ತಿ ವಿಸ್ತರಿಸಿದ್ದು ಇಷ್ಟು ದೂರದಿಂದ ಕಂದಾಯ ಇಲಾಖೆಯ ಕೆಲಸಕ್ಕಾಗಿ ವಾರಗಳ ಕಾಲ ನಿತ್ಯ ಆಗಮಿಸಿದರು ಯಾವುದೇ ಪ್ರಯೋಜವಾಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿಗೆ ನೌಕರರು ತೋರುತ್ತಿರುವ ಅಸಹಕಾರದ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಸ್ವತಃ ತಹಸೀಲ್ದಾರ್ ಸುಪ್ರೀತಾ ಸಹ ಕಡತಗಳ ವಿಲೇವಾರಿಗೆ ನಿರ್ಲಕ್ಷ್ಯ ತೋರುತ್ತಿದ್ದು ಸಲ್ಲದ ಕಾರಣ ನೀಡಿ ಕಡತಗಳನ್ನು ವಾಪಸ್ಸು ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ.
ಹಾನುಬಾಳ್ ಹೋಬಳಿಯ ವೃದ್ದ ಶಿವಕುಮಾರ್ ಎಂಬುವವರು ೨೦೨೪ ರ ಏಪ್ರಿಲ್ ತಿಂಗಳಿನಲ್ಲಿ ಜಮೀನು ಖರೀದಿಸಿದ್ದಾರೆ. ಈ ಜಮೀನನ್ನು ಇವರ ಹೆಸರಿಗೆ ಖಾತೆ ಮಾಡಲು ೨೦೨೫ ಜನವರಿ ತಿಂಗಳು ಕಳೆಯುತ್ತ ಬಂದರು ಸಾಧ್ಯವಾಗಿಲ್ಲ. ಇದೊಂದು ಕಡತ ವಿಲೇವಾರಿ ವಿಳಂಬ ಕಂದಾಯ ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತಿದ್ದು ಇದೆ ರೀತಿಯ ನೂರಾರು ಕಡತಗಳು ವರ್ಷದಿಂದ ತಾಲೂಕು ಕಚೇರಿಯಲ್ಲೇ ಕೊಳೆಯುತ್ತಿವೆ. ಮಧ್ಯವರ್ತಿಗಳ ಹಾವಳಿಕಂದಾಯ ಇಲಾಖೆಯ ಕೆಲಸಕ್ಕೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಲ್ಲದ ಕಾರಣ ನೀಡಿ ಕೆಲಸವನ್ನು ಮುಂದೂಡುತ್ತಾರೆ. ಅದೇ ಕೆಲಸವನ್ನು ಮಧ್ಯವರ್ತಿಗಳಿಗೆ ನೀಡಿದರೆ ದಿನಬೆಳಗಾಗುವುದರಲ್ಲಿ ಕೆಲಸವಾಗಲಿದೆ. ಇದಕ್ಕಾಗಿ ಅಧಿಕಾರಿಗಳೇ ಹಲವು ಮಧ್ಯವರ್ತಿಗಳನ್ನು ನೇಮಿಸಿಕೊಂಡಿದ್ದು ಪ್ರತಿ ಕಡತಕ್ಕೆ ಇಂತಿಷ್ಟು ಹಣ ಎಂದು ನಮೂದಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಖಾತೆ ಮಾಡಲು ಕನಿಷ್ಠ ೨೧ ದಿನಗಳ ಅವಶ್ಯಕತೆ ಇದೆ. ಆದರೆ, ಬೆಳಗೋಡು ಹೋಬಳಿಯ ಗ್ರಾಮವೊಂದರಲ್ಲಿ ಪರಭಾರೆಯಾಗಿದ್ದ ೧೦ ಎಕರೆ ಭೂಮಿಗೆ ವಿರೋಧ ವ್ಯಕ್ತಪಡಿಸಲು ಅವಕಾಶವಿಲ್ಲದಂತೆ ಕೇವಲ ಏಳು ದಿನಗಳ ಅವಧಿಯಲ್ಲಿ ಖಾತೆ ಮಾಡಲಾಗಿದೆ. ಇದು ಮಧ್ಯವರ್ತಿಗಳ ಕೈಚಳಕ ಎಂಬ ಆರೋಪವು ದಟ್ಟವಾಗಿ ಕೇಳಿಬರುತ್ತಿದೆ.ದಾಖಲೆಗಳು ಅಲಭ್ಯ:
ಮಿನಿವಿಧಾನಸೌಧದ ಹಳೇ ಕಡತಗಳು ಬೇಕಿರುವವರನ್ನು ದೇವರೇ ಕಾಪಾಡಬೇಕಿದೆ. ಈ ಹಿಂದೆ ಹಂಗಾಮಿಯಾಗಿ ಹಲವು ವರ್ಷಗಳಿಂದ ಹಳೇ ಕಡತಗಳ ಸಂಗ್ರಹಗಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪ್ರಸಕ್ತ ತಹಸೀಲ್ದಾರ್ ಕೆಲಸದಿಂದ ತೆಗೆದುಹಾಕಿ ಹೊಸದಾಗಿ ಗ್ರಾಮ ಸಹಾಯಕರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಆದರೆ, ೬೦ ಸಾವಿರಕ್ಕೂ ಅಧಿಕ ಕಡತಗಳು ಇರುವ ಕೊಠಡಿಯಲ್ಲಿ ಯಾವ ಕಡತಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಲು ಗ್ರಾಮ ಸಹಾಯಕರಿಗೆ ಅಸಾಧ್ಯವಾಗಿದ್ದು, ಸಾರ್ವಜನಿಕರಿಗೆ ಬೇಕಿರುವ ಕಡತವನ್ನು ಹೊರತೆಗೆಯಲು ಅಲ್ಲಿರುವ ಬಹುತೇಕ ಕಡತಗಳನ್ನು ಜಾಲಾಡಬೇಕಿದೆ. ಸಂಗ್ರಹಗಾರದಲ್ಲಿ ನಿತ್ಯ ಕನಿಷ್ಠ ನೂರಕ್ಕೂ ಅಧಿಕ ಅರ್ಜಿಗಳು ಹಳೇ ಕಡತಗಳಿಗಾಗಿ ಸಲ್ಲಿಕೆಯಾಗುತ್ತಿವೆ. ಆದರೆ, ಸಂಗ್ರಹಗಾರದಲ್ಲಿ ಕಡತಗಳ ಹುಡುಕಾಟಕ್ಕೆ ಅಗತ್ಯವಿರುವ ಸಿಬ್ಬಂದಿಯಾಗಲಿ, ನುರಿತ ನೌಕರರಾಗಲಿ ಇಲ್ಲದಿರುವುದರಿಂದ ಕಡತಗಳ ಹುಡುಕಾಟಕ್ಕೆ ವಿಳಂಬವಾಗುತ್ತಿದೆ. ಇದರಿಂದಾಗಿ ಹಳೆ ಕಡತಗಳ ಸಂಗ್ರಹಗಾರದಲ್ಲಿ ನಿತ್ಯ ಸಾರ್ವಜನಿಕರು ಹಾಗೂ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆಯುತ್ತಿದ್ದು, ಕಡತದ ಬಗ್ಗೆ ಅರಿವಿರುವ ಸಿಬ್ಬಂದಿ ನೇಮಕಕ್ಕೆ ಜನರು ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಗಾಢ ಮೌನಕ್ಕೆ ಶರಣಾಗಿದ್ದಾರೆ.ಕರೆ ಸ್ವೀಕರಿಸದ ತಹಸೀಲ್ದಾರ್:
ಇತ್ತೀಚೆಗೆ ಶಾಸಕರೊಂದಿಗೆ ವಾಗ್ವಾದ ಮಾಡಿಕೊಂಡಿದ್ದ ತಹಸೀಲ್ದಾರ್ ಸುಪ್ರೀತಾ ನಂತರದ ದಿನಗಳಲ್ಲಿ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕರೆಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರ ಹಾಗೂ ಮಾಧ್ಯಮದವರ ಕರೆಯನ್ನು ಸ್ವೀಕರಿಸುವುದಿಲ್ಲ. ಮೂಲ ಕಟ್ಟಡಗಳಿಗೆ ಮರಳದ ಕಚೇರಿಗಳು:ಸಾರ್ವಜನಿಕರ ಸಮಸ್ಯೆಗಳಿಗೆ ಒಂದೇ ಸೂರಿನಲ್ಲಿ ಪರಿಹಾರ ದೊರಕಬೇಕು ಎಂಬ ಉದ್ದೇಶದಿಂದ ಮಿನಿವಿಧಾನ ಸೌಧದ ಎರಡನೇ ಹಂತ ನಿರ್ಮಿಸಲಾಗಿದೆ. ನಿರ್ಮಾಣಗೊಂಡು ಹಲವು ವರ್ಷಗಳ ಕಾಲ ಉದ್ಘಾಟನೆಗಾಗಿ ಕಾದಿದ್ದ ಕಟ್ಟಡವನ್ನು ೨೦೨೫ ಡಿಸಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಯೆ ಉದ್ಘಾಟಿಸಿದ್ದಾರೆ. ಆದರೆ, ಕಟ್ಟಡ ಉದ್ಘಾಟನೆಗೊಂಡು ತಿಂಗಳು ಕಳೆಯುತ್ತ ಬಂದರೂ ಪಟ್ಟಣದ ವಿವಿಧ ದಿಕ್ಕಿನಲ್ಲಿರುವ ನಾಡಕಚೇರಿ, ಸರ್ವೆ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿಗಳು ಮೂಲ ಕಟ್ಟಡಗಳಿಗೆ ಮರಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯತೊರುತ್ತಿದ್ದಾರೆ ಎಂಬ ಆರೋಪವಿದೆ. ಇದರಿಂದಾಗಿ ಕಂದಾಯ ಇಲಾಖೆಯ ವಿವಿಧ ಕೆಲಸಗಳಿಗಾಗಿ ಪಟ್ಟಣದ ವಿವಿದೆಡೆ ಸಾರ್ವಜನಿಕರು ಅಲೆಯಬೇಕಾಗಿದೆ. ತಿಪ್ಪೆ ಸೇರಿದ ಮರಮುಟ್ಟು:
ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಮಂಜ್ರಾಬಾದ್ ತಾಲೂಕು ಕಚೇರಿಯನ್ನು ಮಿನಿವಿಧಾನಸೌಧ ನಿರ್ಮಾಣಗೊಂಡ ನಂತರ ಸ್ಥಳಾಂತರಿಸಲಾಗಿತ್ತು. ಆದರೆ, ಮಂಜ್ರಾಬಾದ್ ತಾಲೂಕು ಕಚೇರಿಯ ಕಟ್ಟಡದ ಶೈಲಿಯನ್ನು ಗಮನಿಸಿ ವಸ್ತು ಸಂಗ್ರಹಗಾರವನ್ನಾಗಿ ರೂಪಿಸುವ ಯೋಜನೆ ತಾಲೂಕು ಆಡಳಿತಕ್ಕೆ ಇತ್ತು. ಆದರೆ, ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಎಂಬ ಕಾರಣಕ್ಕೆ ೨೦೧೮ರಲ್ಲಿ ಕಟ್ಟಡವನ್ನು ನೆಲಸಮಗೊಳಿಸಿ ಇಲ್ಲಿದ್ದ ಉತ್ತಮ ಜಾತಿಯ ಮರಮುಟ್ಟುಗಳನ್ನು ಮಿನಿವಿಧಾನ ಸೌಧದ ನೆಲಮಹಡಿಯಲ್ಲಿ ಸಂರಕ್ಷಿಸಿ ಇಡಲಾಗಿತ್ತು. ಆದರೆ, ೨೦೧೯ರಲ್ಲಿ ಮರಮುಟ್ಟುಗಳನ್ನು ಹರಾಜು ನಡೆಸುವ ಉದ್ದೇಶದಿಂದ ಕಟ್ಟಡದಿಂದ ಹೊರತರಲಾದ ಮರಮುಟ್ಟುಗಳನ್ನು ಸುಮಾರು ೩ ಲಕ್ಷ ರು. ಗಳಿಗೆ ಟೆಂಡರ್ ನಡೆಸಲಾಗಿತ್ತು. ಆದರೆ, ಟೆಂಡರ್ ಕನಿಷ್ಠ ಬೆಲೆಗೆ ಹರಾಜಾಗಿದೆ ಎಂಬ ಕಾರಣ ನೀಡಿ ಟೆಂಡರ್ ರದ್ದುಗೊಳಿಸಲಾಗಿತ್ತು. ಆದರೆ, ಕಟ್ಟಡದಿಂದ ಹೊರತಂದ ಮರಮುಟ್ಟುಗಳನ್ನು ಸ್ವಸ್ಥಾನಕ್ಕೆ ಮರಳಿಸಲು ಇಲಾಖೆ ನಿರ್ಲಕ್ಷ್ಯ ತೋರಿತು. ಮರಮುಟ್ಟುಗಳನ್ನು ಸ್ವಸ್ಥಾನಕ್ಕೆ ಮರಳಿಸುವಂತೆ ಹಲವು ಬಾರಿ ಆಗ್ರಹಗಳು ಕೇಳಿ ಬಂದರು ಇಲಾಖೆ ನಿಲಕ್ಷ್ಯ ತೋರಿತ್ತು. ಪರಿಣಾಮ ಅಪಾರ ಮೊತ್ತದ ಮರಮುಟ್ಟುಗಳು ಬಿಸಿಲು, ಮಳೆಯಿಂದ ತಮ್ಮ ಸತ್ವ ಕಳೆದುಕೊಂಡು ಇತ್ತೀಚೆಗೆ ಸಂಪೂರ್ಣ ಹಾಳಾಗಿದ್ದವು. ಇತ್ತೀಚೆಗೆ ಆ ಮರಮುಟ್ಟುಗಳನ್ನು ಹೊರಹಾಕುವ ಮೂಲಕ ಸ್ವಚ್ಛಗೊಳಿಸಲಾಗಿದೆ.