ಕನ್ನಡಪ್ರಭ ವಾರ್ತೆ ಬೆಳಗಾವಿ
ಶಾಸಕ ಚಂದ್ರು ಲಮಾಣಿ ವಿದ್ಯಾವಂತರಾಗಿರುವ ಕಾರಣಕ್ಕೆ ಅವರನ್ನು ಪಿತೂರಿ ಮಾಡಿ ಸಿಲುಕಿಸಲಾಗಿದೆ. ಅದೇ ಸಮಾಜದ ವ್ಯಕ್ತಿಯನ್ನು ಬಳಸಿ ಷಡ್ಯಂತ್ರ ನಡೆಸಿ ಜೈಲು ಪಾಲು ಮಾಡಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ ನಿರ್ದೋಷಿಯನ್ನು ಸಿಲುಕಿಸುವುದು ಸರಿಯಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಶಾಸಕರನ್ನು ಕಳೆದ 20 ವರ್ಷಗಳಿಂದ ತುಳಿಯುವ ಕೆಲಸ ನಡೆಯುತ್ತಿದೆ. ನಾವು ಧ್ವನಿ ಎತ್ತಲೇಬೇಕಾಗಿದೆ. ಲೋಕಾಯುಕ್ತರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಶಾಸಕ ಚಂದ್ರು ಲಮಾಣಿ ಮೇಲೆ ನಡೆದಿರುವ ಲೋಕಾಯುಕ್ತ ದಾಳಿ ವಿಚಾರ ಸರಿಯಲ್ಲ. ಮಾಜಿ ಶಾಸಕ ವೈ.ಸಂಪಂಗಿಯನ್ನೂ ಇದೇ ರೀತಿ ಸಿಲುಕಿಸಿದ್ದರು. ಸಂಜೆ ನಿವೃತ್ತಿಯಾಗಬೇಕಿದ್ದ ಅಧಿಕಾರಿ ಮೇಲೆ ಮಧ್ಯಾಹ್ನ ದಾಳಿ ನಡೆಸಿರುವುದು ವಿಷಾದನೀಯ ಎಂದರು.
ಶೇ.74ರಷ್ಟು ಮತದಾರರು ಇರಬೇಕು ಎನ್ನುವ ಸಮಾಜವನ್ನು ಉಳಿಸುವ ಯತ್ನ ನಡೆದಿದೆ. ಅಹಿಂದ ಎನ್ನುವ ನಾವು ಎಲ್ಲರೂ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಆದರೆ, ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದ ಅವರು, ದಲಿತ ಪರ ಸರ್ಕಾರ ಎಂದು ಹೇಳಿಕೊಳ್ಳುವವರ ಅಧಿಕಾರಾವಧಿಯಲ್ಲೇ ಈ ಘಟನೆ ನಡೆದಿದೆ. ಭ್ರಷ್ಟಾಚಾರ ಆರೋಪ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡುವುದು ಕಷ್ಟ. ದಲಿತ ಹಾಗೂ ಅಹಿಂದ ಶಾಸಕರು ಏಕೆ ಬಲೆಗೆ ಬೀಳುತ್ತಾರೆ ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿಯೊಬ್ಬರು ದಲಿತ ವ್ಯಕ್ತಿಯನ್ನು ಬಳಸಿ ಕೃತ್ಯ ನಡೆಸಿದ್ದಾರೆ. ನನ್ನ ಮೇಲೆ ಏನು ಮಾಡಿದ್ದಾರೆ ಗೊತ್ತು. ನಾನು ಒಬ್ಬ ಸಂತ್ರಸ್ತ. ವಿಷಯ ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನ ಸಿದ್ದರಾಮಯ್ಯರಾಗಿ ಈಗ ಉಳಿದಿಲ್ಲ. ನಾನು ಅವರ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಆದರೂ ಅವರು ಕೇವಲ ಕುರುಬ ನಾಯಕ ಅಲ್ಲ. ಅಹಿಂದ ವರ್ಗದ ನಾಯಕ. ದಲಿತ ಶಾಸಕರ ಪರವಾಗಿ ಸಿಎಂ ಅವರನ್ನು ಭೇಟಿ ಮಾಡಿ ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಮನವಿ ಮಾಡುತ್ತೇನೆ. ಬಿಜೆಪಿಯಲ್ಲಿರುವ ಗೊಂದಲವನ್ನು ಇತ್ಯರ್ಥಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಾನಿಯಾಗಬಹುದು. ಕಾಂಗ್ರೆಸ್‌ನಲ್ಲಿರುವ ಗೊಂದಲವನ್ನು ಇತ್ಯರ್ಥ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಬಿಜೆಪಿಯಲ್ಲಿ ಇರುವ ಗೊಂದಲ ಇತ್ಯರ್ಥಕ್ಕೆ ಮನವಿ ಮಾಡುತ್ತೇನೆ ಎಂದರು.
