ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ಬಗ್ಗೆ ವಿರೋಧ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಕೋಟೆ ಶೃಂಗೇರಿ ಶಾರದಾ ಪೀಠ ಸಭಾಂಗಣದಲ್ಲಿ ನಡೆದ "ವಿಕಾಸ ಬೇಲೂರು ಹಬ್ಬ " ಕಾರ್ಯಕ್ರಮದಲ್ಲಿ ಮಂಜುನಾಥ ಸೀತಾರಾಮ ಶಾಸ್ತ್ರಿ ಬರೆದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬ್ರಾಹ್ಮಣ ಸಮುದಾಯವನ್ನು ಹೀಗಳೆಯುವ ಪ್ರವೃತ್ತಿ ಹೆಚ್ಚಾಗಿದೆ. ದಸರಾ ಮಾಡಬೇಕು ಎಂದರೆ ಮಹಿಷ ದಸರಾ ಮಾಡಬೇಕು ಎನ್ನುತ್ತಾರೆ. ಸನಾತನ ಧರ್ಮ ಮತ್ತು ಬ್ರಾಹ್ಮಣರ ಕುರಿತು ಡಿಎಂಕೆ ನಾಯಕ ಸ್ಟಾಲಿನ್, ಅವರ ಮಗ ಉದಯ ನಿಧಿ ಬೇಕಾಬಿಟ್ಟಿ ಹೇಳಿಕೆ ನೀಡಿ ನಿಂದಿಸುತ್ತಿದ್ದಾರೆ. ಮೈಸೂರಿನಲ್ಲಿ ಭಗವಾನ್ ಎಂದು ಹೆಸರಿಟ್ಟುಕೊಂಡಿರುವ ಸಮಾಜ ಚಿಂತಕ, ಬ್ರಾಹ್ಮಣರು ಪೂಜೆ ಮಾಡುವ ದೇಗುಲಗಳಿಗೆ ಭೇಟಿ ನೀಡುವುದಿಲ್ಲ ಎಂದು ಅವಹೇಳನಕಾರಿ ಹೇಳಿಕೆ ನೀಡುತ್ತಾನೆ. ಇಂದಿಗೂ ಸಂಸ್ಕೃತ, ವೇದ ಪಾಠಶಾಲೆ ಹಾಗೂ ನಮ್ಮ ಆಚಾರ ವಿಚಾರಗಳಿಂದ ಹಿಂದೂ ಪುರಾತನ ಸಂಸ್ಕೃತಿ ಜೀವಂತವಾಗಿ ಉಳಿದಿದೆ ಎಂದರು.ಹಣ, ಚಿನ್ನ, ಆಸ್ತಿಯನ್ನು ಕದಿಯಬಹುದು. ಆದರೆ ವಿದ್ಯೆ ಇದ್ದರೆ ಅದನ್ನು ಕದಿಯಲು ಆಗುವುದಿಲ್ಲ. ಇದರೊಂದಿಗೆ ಸಂಸ್ಕಾರವೂ ಬೆಳೆಯುತ್ತದೆ. ಹಾಗಾಗಿ ನಮ್ಮ ಬಾಂಧವರು ಮಕ್ಕಳಿಗೆ ವಿದ್ಯೆ ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು. ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಸವಾಲುಗಳ ಎದುರಾಗುತ್ತಿವೆ. ಪತ್ರಕರ್ತರ ವಿರುದ್ಧ ಪಿತೂರಿ ನಡೆಸುವ ಪರಿಸ್ಥಿತಿ ಇದೆ. ಅದರಲ್ಲಿಯೂ ಬ್ರಾಹ್ಮಣ ಪತ್ರಕರ್ತರ ಮೇಲೆ ಹೆಚ್ಚಾಗಿ ಬಿಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಪ್ರರು ಮಾಧ್ಯಮ ಕ್ಷೇತ್ರದಿಂದ ದೂರವಾಗುತ್ತಿರುವುದು ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ವಿಧಾನಸೌಧ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಮ್ಮ ಬಳಗದವರು ಉನ್ನತ ಶ್ರೇಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಂದ ನಮಗೆ ಸರಿಯಾದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಾಮಾಜಕ್ಕೆ ಸಿಗಬೇಕಾದ ಸವಲತ್ತುಗಳು ಹಾಗೂ ಸಹಕಾರದ ಬಗ್ಗೆ ಅವರಿಂದ ಮಾಹಿತಿ ಪಡೆಯಲು ರಾಜ್ಯ ವಿಕಾಸ ವೇದಿಕೆ ಮುಂದಾಗಬೇಕು ಎಂದು ಹೇಳಿದರು.ವಿಕಾಸ ವೇದಿಕೆಯ ಹನುಮೇಶ್ ಹಾನಗಲ್ ಮಾತನಾಡಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳನ್ನು ಮಾಡಿ ಸೇವೆಯನ್ನು ಸಲ್ಲಿಸಿರುವ ನಿವೃತ್ತ ಗಣ್ಯರನ್ನು ಗುರುತಿಸಿ ಅವರ ಕಷ್ಟ ಸುಖಗಳಿಗೆ ಕೈಜೋಡಿಸುವ ಕೆಲಸವನ್ನು ವಿಕಾಸ ಸಂಸ್ಥೆಯು ಮಾಡಿಕೊಂಡು ಬರುತ್ತಿದೆ. ನಮ್ಮ ವಿಕಾಸ ಸಂಸ್ಥೆಯ ಜೊತೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಕೂಡ ಭಾಗಿಯಾಗಿ ಸಂಕಷ್ಟಲಿದ್ದ ವಿಪ್ರ ಪತ್ರಕರ್ತ ಬಂಧುಗಳಿಗೆ ಸಕಾಲದಲ್ಲಿ ನೆರವು ನೀಡಿರುತ್ತಾರೆ. ನಮ್ಮನ್ನು ತುಳಿಯುವ ಹೀಯಾಳಿಸುವ ಹಾಗೂ ನಿರ್ಲಕ್ಷ್ಯ ಮಾಡುವ ಸಂದರ್ಭದಲ್ಲಿ ವಿಕಾಸ ವೇದಿಕೆಯು ಎಲ್ಲರ ಬೆನ್ನೆಲುಬಾಗಿ ನಿಂತಿದೆ ಎಂದರು.ಈ ಸಂದರ್ಭದಲ್ಲಿ, ವಿಕಾಸ ವೇದಿಕೆಯ ಶ್ರೀನಾಥ್ ಜೋಷಿ , ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಪ್ರಥಮ ಅಧ್ಯಕ್ಷ ತೊ.ಚ ಅನಂತ ಸುಬ್ಬರಾಯ, ಕನ್ನಡಪ್ರಭ ಪ್ರಸರಣ ವಿಭಾಗದ ಮುಖ್ಯಸ್ಥರಾದ ಎಂ ಎನ್ ಅನಂತಮೂರ್ತಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್ ಮಂಜುನಾಥ್, ತಾಲೂಕು ಅಧ್ಯಕ್ಷ ಸಿ ಆರ್ ವಿಜಯಕೇಶವ, ಹಿರಿಯ ಸಂಪಾದಕ ಪ್ರಕಾಶಕ ಎಸ್ ಗಿರಿಜಾ ಶಂಕರ್, ಶಂಕರ ಮಠದ ಕಾರ್ಯದರ್ಶಿ ಸುಬ್ರಮಣ್ಯ, ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆಪಿಎಸ್ ಪ್ರಮೋದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಇತರರು ಹಾಜರಿದ್ದರು. ವಿಕಾಸ ಬೇಲೂರು ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ವಿಪ್ರ ವಿಕಾಸ ಪ್ರಶಸ್ತಿ, ನಮ್ಮ ಹಿರಿಯರು ನಮ್ಮ ಹೆಮ್ಮೆ ಹಿರಿಯ ಮಾಧ್ಯಮ ಸಾಧಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.