ಕಾಡ್ಗಿಚ್ಚು ಕಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿಗೆ ಹೆಚ್ಚು ಹಾನಿಯಾಗದಂತೆ ತಡೆಯಬಹುದು. ಅರಣ್ಯದಲ್ಲಿ ಬೆಂಕಿ ಕೆನ್ನಾಲಗೆ ಎಷ್ಟು ಪ್ರಮಾಣದಲ್ಲಿ ವ್ಯಾಪಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ರೂಪಿಸಬೇಕು. ಇದರಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಬೇಸಿಗೆ ಅವಧಿಯಲ್ಲಿ ಅರಣ್ಯದೊಳಗೆ ಕಾಣಿಸಿಕೊಳ್ಳುವ ಕಾಡ್ಗಿಚ್ಚನ್ನು ತಕ್ಷಣ ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಸೈನಿಕರಂತೆ ಸನ್ನದ್ಧರಾಗಿ ಕೆಲಸ ಮಾಡಬೇಕು ಎಂದು ವನ್ಯಜೀವಿ ವಲಯದ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಹೇಳಿದರು.

ಮೇಲುಕೋಟೆಯ ಅರಣ್ಯ ಇಲಾಖೆ ಕಚೇರಿಯಲ್ಲಿ ಕಾಡ್ಗಿಚ್ಚು ನಿಯಂತ್ರಿಸುವ ಬಗ್ಗೆ ಸಿಬ್ಬಂದಿಗೆ ಅರಿವು ಮೂಡಿಸುವ ಸಂಬಂಧ ಹಮ್ಮಿಕ್ಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾಮಾನ್ಯವಾಗಿ ಕಾಡಿನೊಳಗೆ ಬೇಸಿಗೆ ವೇಳೆ ಅಗ್ನಿ ಅವಘಡಗಳು ಸಂಭವಿಸಿದಾಗ ತುರ್ತು ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಲು ಸಿಬ್ಬಂದಿ ವಾಹನ ಹಾಗೂ ನೀರಿನ ಕ್ಯಾನ್ ಬಳಸಿಕೊಳ್ಳಬೇಕು ಎಂದರು.

ಕಾಡ್ಗಿಚ್ಚು ಕಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿಗೆ ಹೆಚ್ಚು ಹಾನಿಯಾಗದಂತೆ ತಡೆಯಬಹುದು. ಅರಣ್ಯದಲ್ಲಿ ಬೆಂಕಿ ಕೆನ್ನಾಲಗೆ ಎಷ್ಟು ಪ್ರಮಾಣದಲ್ಲಿ ವ್ಯಾಪಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ರೂಪಿಸಬೇಕು. ಇದರಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಾಗಲಿದೆ ಎಂದರು.

ಬೆಂಕಿಯಿಂದಾಗುವ ಹಾನಿ ತಡೆಗಟ್ಟಲು ಮುಂಜಾಗ್ರತೆ ವಹಿಸುವುದು ಮುಖ್ಯ. ಅರಣ್ಯದೊಳಗೆ ಕಾಡ್ಗಿಚ್ಚಿನಂತಹ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವ ಕುರಿತು ಕಾಡಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ ಎಂದರು.

ಗ್ರಾಮಗಳ ಮುಖಂಡರು ಹಾಗೂ ಆದಿವಾಸಿ ಸಮುದಾಯಗಳ ನಾಯಕರ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಸಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ಮಹತ್ವ ಹಾಗೂ ಕಾಡ್ಗಿಚ್ಚಿನ ದುಷ್ಪಣಾಮಗಳನ್ನು ಮನವರಿಕೆ ಮಾಡಲಾಗಿದೆ. ಗ್ರಾಮಸ್ಥರಿಗೆ ಜಾನುವಾರು ಮೇಯಿಸುವಾಗ ಕಾಡಂಚಿನ ಗ್ರಾಮಗಳಲ್ಲಿ ಬೀಡಿ ಸಿಗರೇಟು ಸೇದಿ ಎಸೆಯಬಾರದು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಮಂಡ್ಯ ವಿಭಾಗದ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಮಾತನಾಡಿ, ಅರಣ್ಯದಲ್ಲಿ ಅಮೂಲ್ಯ ಮರ ಮುಟ್ಟುಗಳು ಶತಮಾನದಿಂದ ಬೆಳೆದಿವೆ. ಅಮೂಲ್ಯ ಔಷಧೀಯ ಸಸ್ಯಗಳು ಮತ್ತು ಜೀವ ಸಂಕುಲಗಳು ಪ್ರಾಣಿಗಳಗೆ ಕಾಡ್ಗಿಚ್ಚು ಮಾರಕವಾಗಲಿದೆ. ಈ ಬಾರಿ ಸಣ್ಣ ಅವಘಡಕ್ಕೂ ಆಸ್ಪದವಾಗದಂತೆ ತಡೆಯಲು ತಿಂಗಳ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದರು.

ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 6 ತನಕ ಹದ್ದಿನ ಕಣ್ಣಿಟ್ಟು ಸಿಬ್ಬಂದಿ ಕಾವಲು ಕಾಯಬೇಕು. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದಾಗ ಅದನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಬೆಂಕಿ ನಂದಿಸುವ ಬೋಯರ್ಸ್, ಸ್ಪ್ರೇಯರ್ಸ್, ಫೈರ್ ಬೇಯರ್ಸ್‌ಗಳನ್ನು ಸಿದ್ಧಗೊಳಿಸಲಾಗಿದೆ. ಇದೆಲ್ಲದರ ನಡುವೆ ಅರಣ್ಯ ಸಿಬ್ಬಂದಿ, ಫೈರ್ ವಾಚರ್ ಅಗ್ನಿಶಾಮಕ ದಳ ನಮಗೆ ನೆರವಾಗಲಿದೆ ಎಂದರು.

ವೇದಿಕೆಯಲ್ಲಿ ವನ್ಯಜೀವಿವಲಯದ ಪಾಂಡವಪುರ ವಲಯ ಅರಣ್ಯಾಧಿಕಾರಿ ಎಂ.ಸಿ.ಯೋಗೇಶ್, ನಾಗಮಂಗಲ ಉಪವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಶಿವರಾಮು, ಸಂಪನ್ಮೂಲ ವ್ಯಕ್ತಿ ಕಾಂತರಾಜು, ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿ ಅನಿತಾ, ಮೇಲುಕೋಟೆ ಅರಣ್ಯವಲಯದ ವಲಯ ಸಂರಕ್ಷಣಾಧಿಕಾರಿ ಪ್ರಶಾಂತ್, ಅರಣ್ಯಾಧಿಕಾರಿ ಕೋಟ್ರೇಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದರು.