ಪಕ್ಷಾತೀತವಾಗಿ ಕೆಲಸ ಮಾಡಿ ಜನರಿಗೆ ಸಹಕರಿಸಿ: ಸಂಸದ ಶ್ರೇಯಸ್ ಪಟೇಲ್

| Published : Jun 23 2024, 02:00 AM IST

ಪಕ್ಷಾತೀತವಾಗಿ ಕೆಲಸ ಮಾಡಿ ಜನರಿಗೆ ಸಹಕರಿಸಿ: ಸಂಸದ ಶ್ರೇಯಸ್ ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಮಟ್ಟದ ಅಧಿಕಾರಿಗಳಾಗಿರಬಹುದು, ಕಚೇರಿಗೆ ಸಾಮಾನ್ಯ ಜನರು ಬಂದರೂ ಪಕ್ಷಾತೀತವಾಗಿ ಕೆಲಸ ಮಾಡಿಕೊಡಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು. ಹಾಸನದಲ್ಲಿ ಜಿಲ್ಲಾ ನೂತನ ಸಂಸದರಿಗೆ ಜಿಲ್ಲಾ ಕಾಂಗ್ರೆಸ್ ಎಸ್‌ಸಿ. ಎಸ್‌ಟಿ. ಬಳಗದಿಂದ ಶನಿವಾರ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸರ್ಕಾರಿ ಅಧಿಕಾರಿಗಳಿಗೆ ತಾಕೀತು । ಈ ಗೆಲುವಿನಿಂದ ಮೈಮರೆಯಬೇಡಿ: ಕಾರ್ಯಕರ್ತರಿಗೆ ಸಲಹೆ

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಹಲವು ಕಡೆಗಳಲ್ಲಿ ಜನರ ಕೆಲಸ ಮಾಡಿಕೊಡಲು ಕೆಲ ಅಧಿಕಾರಿಗಳು ಹಾಗೂ ನೌಕರರು ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಯಾವುದೇ ಮಟ್ಟದ ಅಧಿಕಾರಿಗಳಾಗಿರಬಹುದು, ಕಚೇರಿಗೆ ಸಾಮಾನ್ಯ ಜನರು ಬಂದರೂ ಪಕ್ಷಾತೀತವಾಗಿ ಕೆಲಸ ಮಾಡಿಕೊಡಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ನೂತನ ಸಂಸದರಿಗೆ ಜಿಲ್ಲಾ ಕಾಂಗ್ರೆಸ್ ಎಸ್‌ಸಿ. ಎಸ್‌ಟಿ. ಬಳಗದಿಂದ ಶನಿವಾರ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಎಲ್ಲಾ ಸೇರಿ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದು, ಕಳೆದ ೨೫ ವರ್ಷಗಳ ನಂತರದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೆ ಈಗ ನಮಗೆ ಜವಬ್ಧಾರಿ ಹೆಚ್ಚಿದೆ. ಜತೆಗೆ ಸವಾಲು ಕೂಡ ಹೆಚ್ಚಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು, ಎಲ್ಲರ ಸಲಹೆ ಸಹಕಾರ ನನಗೆ ಖಂಡಿತ ಬೇಕಾಗಿದೆ. ಪರಿಶಿಷ್ಟ ಜಾತಿ ಪಂಗಡದಿಂದ ನನಗೆ ಅಭಿನಂದನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಚುನಾವಣೆ ವೇಳೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಈ ಬಾರಿ ಮತವನ್ನು ಹಾಕಿದ್ದಾರೆ’ ಎಂದು ಹೇಳಿದರು.

‘ಗೆಲುವು ಸಿಕ್ಕಿದೆ ಎಂದು ಮೈ ಮರೆಯುವುದು ಬೇಡ. ವರ್ಷದ ೩೬೫ ದಿನಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ವಾರದ ಏಳು ದಿನಗಳಲ್ಲಿ ಎರಡು ದಿನ ಜಿಲ್ಲಾಧಿಕಾರಿ ಕಛೇರಿಯಲ್ಲಿರುತ್ತೇನೆ. ೧೫ ದಿನಕ್ಕಾದರೂ ಪಕ್ಷದ ಕಾರ್ಯಕರ್ತರ ಸಭೆ, ಸಾರ್ವಜನಿಕರ ಸಭೆಯನ್ನು ಜವಾಬ್ಧಾರಿಯುತವಾಗಿ ಮಾಡಲಾಗುವುದು. ಕಾರ್ಯಕರ್ತರ ಕಷ್ಟ, ನೋವುಗಳನ್ನು ಕೂಡ ನೋಡಬೇಕಾಗುತ್ತದೆ. ಕಾರ್ಯಕರ್ತರೇ ನಮಗೆ ಹುರಿಯಾಳು’ ಎಂದು ತಿಳಿಸಿದರು.

‘ಪಕ್ಷದಲ್ಲೆ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುತ್ತಿಲ್ಲ. ನಾಮನಿರ್ದೇಶನ ಕೂಡ ಆಗಿರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ನಿಷ್ಠಾವಂತ ಕಾರ್ಯಕತರನ್ನು ಗುರುತಿಸುವ ಕೆಲಸ ಮಾಡಲಾಗುವುದು. ತಾಳ್ಮೆ ಇದ್ದರೆ ಒಂದಲ್ಲ ಒಂದು ದಿನ ಪಕ್ಷ ಗುರುತಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮುಂದೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬರಲಿದ್ದು, ಈಗಾಗಲೇ ಜೆಡಿಎಸ್ ಬಿಜೆಪಿ ಒಂದಾಗಿವೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ನಾವು ಮುಂದಿನ ದಿನಗಳಲ್ಲಿ ಕಾರ್ಯಪ್ರವೃತರಾಗಬೇಕು. ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಮಾಡಬೇಕು. ೨೫ ಕಡೆ ನಾವು ಗೆಲ್ಲಲೇಬೇಕು. ಪಕ್ಷದ ಗೌರವ ಕಾಪಾಡಬೇಕು. ೮ ತಾಲೂಕುಗಳ ಕಡೆ ನಾವು ಗಮನ ಕೊಟ್ಟು ಇದೇ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗೋಣ’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ./ಎಸ್.ಟಿ. ಬಳಗದಿಂದ ನೂತನ ಸಂಸದ ಶ್ರೇಯಸ್ ಎಂ. ಪಟೇಲ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನೂತನ ಸಂಸದರು ಕಾಂಗ್ರೆಸ್ ಕಚೇರಿ ಮುಂದೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಬರಮಾಡಿಕೊಂಡರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ, ಮುಖಂಡರಾದ ರಾಮಚಂದ್ರ, ಮಂಜುನಾಥ್ ಶರ್ಮ, ಗಾಯಿತ್ರಿ, ದಾವುದ್, ಲಕ್ಷ್ಮಣ್, ರಂಜಿತ್ ಗೊರೂರು, ದೇವರಾಜು, ಪ್ರಕಾಶ್, ಮಂಡಿಗನಹಳ್ಳಿ ಚಂದ್ರು, ನಾಯಕರಹಳ್ಳಿ ಅಶೋಕ್, ಪ್ರಕಾಶ್ ಗೌಡಗೆರೆ, ಜಿ.ಒ. ಮಹಂತಪ್ಪ, ವೆಂಕಟೇಶ್, ಅಮ್ಜದ್ ಸೇರಿದಂತೆ ಇತರರು ಇದ್ದರು.