ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿ, ವಲಸೆ ಬಿಡಿ: ದೇವರಾಜ

| Published : Mar 27 2024, 01:05 AM IST

ಸಾರಾಂಶ

ಬೇಸಿಗೆ ಇರುವುದರಿಂದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸಲು ಯಾವುದೇ ರೀತಿಯ ಕೆಲಸ ಇರುವುದಿಲ್ಲ.

- ಹಲಗೇರಿ ಗ್ರಾಪಂಯ ಹಣವಾಳ ಗ್ರಾಮದಲ್ಲಿ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಇರುವುದರಿಂದ ವಲಸೆ ಹೋಗುವುದನ್ನು ಕೈಬಿಟ್ಟು, ಸ್ಥಳೀಯವಾಗಿಯೇ ಕೆಲಸ ಮಾಡುವಂತೆ ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಹೇಳಿದರು.

ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿಯ ಹಣವಾಳ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮೇ 31 ರವರೆಗೆ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ನಡೆದ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತಾಡಿದರು.

ಬರಗಾಲ ಇರುವುದರಿಂದ ಕೂಲಿ ಬಯಸಿ ಬೇರೆ ಕಡೆಗೆ ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿ ನಿರಂತರವಾಗಿ 60 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಈ ಅಭಿಯಾನವನ್ನು ಗ್ರಾಪಂ ವ್ಯಾಪ್ತಿಯಲ್ಲಿ ಜರುಗಿಸುವಂತೆ ನಿರ್ದೇಶನ ನೀಡಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.

ಬೇಸಿಗೆ ಇರುವುದರಿಂದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸಲು ಯಾವುದೇ ರೀತಿಯ ಕೆಲಸ ಇರುವುದಿಲ್ಲ. ಇದರಿಂದ ಕೆಲಸಕ್ಕಾಗಿ ಗುಳೆ ಹೋಗುವುದನ್ನು ನಿಯಂತ್ರಿಸಬಹುದಾಗಿದೆ. ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು, ಏಪ್ರಿಲ್‌ & ಮೇ ತಿಂಗಳುಗಳಲ್ಲಿ ಪ್ರತಿಯೊಂದು ಕುಟುಂಬ 60 ದಿನಗಳ ಕೆಲಸ ಪೂರೈಸಬೇಕೆನ್ನುವ ಉದ್ದೇಶ ಹೊಂದಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ ಇದೆ. ಪ್ರತಿ ಸಾಮುದಾಯಿಕ ಕಾಮಗಾರಿಯಲ್ಲಿ ಶೇ.60ರಷ್ಟು ಮಹಿಳೆಯರು ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೆಲಸ, ಸಮಾನ ಕೂಲಿ ಪಾವತಿಸಲಾಗುತ್ತದೆ. ಕೆಲಸದ ಅಳತೆಗನುಗುಣವಾಗಿ ಕೂಲಿ ಪಾವತಿಸಲಾಗುತ್ತಿದ್ದು ಎಲ್ಲ ಕೂಲಿಕಾರರು ಹಾಲಿ ಇರುವ ₹316 ಕ್ಕೆ ನಿರ್ಧರಿಸಿದಂತೆ ಕೆಲಸವನ್ನು ನಿರ್ವಹಿಸಿ ಪೂರ್ತಿ ಪ್ರಮಾಣದಲ್ಲಿ ಕೂಲಿ ಪಡೆಯಬೇಕೆಂದರು.

ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಮಹಿಳಾ ಕಾಯಕ ಬಂಧುಗಳ ನೇಮಕವಾಗಲು ಪ್ರತಿ ಪುರುಷ ಕಾಯಕ ಬಂಧುವಿಗೆ ₹4 ಹಾಗೂ ಮಹಿಳಾ ಕಾಯಕ ಬಂಧುವಿಗೆ ₹5 ಪಾವತಿಸಲಾಗುತ್ತದೆ ಎಂದರು.

ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರ ಶೆಡ್‌, ಮೆಕೆಶೆಡ್‌, ಕೃಷಿಹೊಂಡ, ಕೋಳಿಶೆಡ್‌, ಹಂದಿಶೆಡ್‌, ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇರುತ್ತದೆ. ಜಮೀನು ಸ್ಥಳಾವಕಾಶ ಇಲ್ಲದವರು ಸಾಮೂಹಿಕ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ ಯೋಜನೆಯಡಿ ಕೂಲಿ ಪಡೆಯಬಹುದಾಗಿದೆ. ಬರಗಾಲ ಇರುವುದರಿಂದ ಕೂಲಿಕಾರರು 60 ದಿನಗಳ ಕಾಲ ಕೂಲಿ ಕೆಲಸ ನಿರ್ವಹಿಸಿದಲ್ಲಿ ₹18960 ದೊರೆಯುತ್ತದೆ. ಬಿತ್ತನೆಯ ಸಮಯದಲ್ಲಿ, ಮಕ್ಕಳ ಶಾಲಾ ಶಿಕ್ಷಣ ಉದ್ದೇಶಕ್ಕಾಗಿ ಬಳಕೆಗೆ ಸಹಕಾರಿಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ 342 ಕೂಲಿಕಾರರಿಂದ ಫಾರಂ 6 ಸ್ವೀಕರಿಸಲಾಯಿತು.

ನಂತರ ಕೂಲಿಕಾರರಿಗೆ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್‌ ಕಾರ್ಯಕ್ರಮ ಜರುಗಿತು. ಮೇ 7 ರಂದು ಲೋಕಸಭಾ ಚುನಾವಣೆ ಜರುಗಲಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕೆಂದು ಕರೆ ನೀಡಲಾಯಿತು. ಪ್ರತಿ ಮತ, ದೇಶದ ಅಭಿವೃದ್ಧಿಗೆ ಹಿತ ಎಂದು ಅರಿತುಕೊಂಡು ನಾವೆಲ್ಲರೂ ಮತದಾನದಲ್ಲಿ ಭಾಗವಹಿಸೋಣ ಎಂದರು. ಮತದಾನದ ಪ್ರತಿಜ್ಞಾ ವಿಧಿಯನ್ನು ಹಲಗೇರಿ ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ ಬೋಧಿಸಿದರು.

ಕಾರ್ಯಕ್ರಮದಲ್ಲಿ ಬೇರ್‌ ಫೂಟ್‌ ಟೆಕ್ನಿಷಿಯನ್‌ ಮಲ್ಲಯ್ಯ ಮಳ್ಳಯ್ಯನವರ, ಗ್ರಾಮ ಕಾಯಕ ಮಿತ್ರ ವಿಜಯಲಕ್ಷ್ಮೀ, ಕಾಯಕ ಬಂಧು ರುದ್ರಪ್ಪ ಕರ್ಕಿಹಳ್ಳಿ, ಸಿದ್ದಪ್ಪ ಬಾರಕೇರ, ಸಿದ್ದಬೀರಪ್ಪ ಸಿಂಧೋಗೆಪ್ಪನವರ, ವಿಜಯಲಕ್ಷ್ಮೀ ಕರ್ಕಿಹಳ್ಳಿ, ಮಂಜುಳಾ ಬಾರಕೇರ, ಕೂಲಿಕಾರರು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.