ಅಂತೂ ಇಂತೂ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ.

ಹೊಸಪೇಟೆ: ಅಂತೂ ಇಂತೂ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಲಾಗಿದ್ದು, ಜಲಾಶಯದ 18ನೇ ಕ್ರಸ್ಟ್‌ ಗೇಟ್‌ ಅನ್ನು ಬುಧವಾರ ಪೂಜೆ ಸಲ್ಲಿಸಿ ಅಳವಡಿಕೆ ಆರಂಭಿಸಲಾಯಿತು. ಈ ಗೇಟ್‌ನ್ನು 12 ಭಾಗಗಳಾಗಿ ಅಳವಡಿಕೆ ಮಾಡಲಾಗುತ್ತಿದ್ದು, ಎಂಟ್ಹತ್ತು ದಿನಗಳಲ್ಲಿ ಗೇಟ್‌ ಅಳವಡಿಕೆ ಪೂರ್ಣಗೊಳ್ಳಲಿದೆ.

ಜಲಾಶಯದ 19ನೇ ಕ್ರಸ್ಟ್ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. ಈ ಬಳಿಕ ಈ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿತ್ತು. ಜಲಾಶಯದ ಎಲ್ಲ 33 ಕ್ರಸ್ಟ್‌ ಗೇಟ್‌ಗಳು ಶಿಥಿಲಗೊಂಡಿವೆ ಎಂದು ಪರಿಣತರ ತಂಡ ವರದಿ ನೀಡಿತ್ತು. ಇನ್ನು ಪರಿಣತ ಕನ್ನಯ್ಯ ನಾಯ್ಡು ಜಲಾಶಯಕ್ಕೆ ಆಗಮಿಸಿ ಪರಿಶೀಲಿಸಿ ಜಲಾಶಯದ ಗೇಟ್‌ಗಳನ್ನು ಬದಲಿಸಬೇಕು ಎಂದು ವರದಿ ಕೂಡ ನೀಡಿದ್ದರು.

20 ಪರಿಣತರಿಂದ ಅಳವಡಿಕೆ: ಜಲಾಶಯದ ನೀರಿನ ಮಟ್ಟ 1612.63 ಅಡಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಗುಜರಾತ್‌ ಮೂಲದ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಯ 20 ಪರಿಣತ ಕಾರ್ಮಿಕರು, ಪರಿಣತ ಎಂಜಿನಿಯರ್‌ಗಳನ್ನು ಬಳಕೆ ಮಾಡಿಕೊಂಡು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ಹಾಗೂ ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ, ಇಇ ಚಂದ್ರಶೇಖರ ನೇತೃತ್ವದಲ್ಲಿ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಉಳಿದ ಕ್ರಸ್ಟ್‌ ಗೇಟ್‌ಗಳನ್ನು ಹಂತ ಹಂತವಾಗಿ ಅಳವಡಿಕೆ ಮಾಡಲಾಗುತ್ತದೆ. 33 ಕ್ರಸ್ಟ್‌ ಗೇಟ್‌ಗಳಲ್ಲಿ ಈಗಾಗಲೇ ಏಳು ಕ್ರಸ್ಟ್‌ ಗೇಟ್‌ಗಳನ್ನು ತೆರವು ಮಾಡಲಾಗಿದೆ. 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿದೆ.

ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡಬೇಕು ಎಂದು ವಿರೋಧ ಪಕ್ಷಗಳು ಅಧಿವೇಶನದಲ್ಲೂ ಧ್ವನಿ ಎತ್ತಿದ್ದವು. ಇನ್ನೂ ರೈತರು ಕೂಡ ಗೇಟ್‌ಗಳ ಅಳವಡಿಕೆಗೆ ಒತ್ತಾಯಿಸಿದ್ದರು.