ಸಾರಾಂಶ
ಅಧಿಕಾರಿಗಳಿಗೆ ಲೋಕಾಯುಕ್ತ ನಿರೀಕ್ಷಕ ಸೂಚನೆಕನ್ನಡಪ್ರಭ ವಾರ್ತೆ ಕಂಪ್ಲಿ
ಸುಖಾ ಸುಮ್ಮನೇ ಕಾರಣ ನೀಡುತ್ತಾ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವುದು ಬಿಟ್ಟು ಕಾನೂನಿನ ಚೌಕಟ್ಟಿನಲ್ಲಿ ಸಕಾಲದಲ್ಲಿ ಕೆಲಸ ಮಾಡಲು ಪ್ರತಿಯೊಬ್ಬ ಅಧಿಕಾರಿಗಳು ಮುಂದಾಗಬೇಕು ಎಂದು ಬಳ್ಳಾರಿಯ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಇಲಾಖೆಯ ಅಧಿಕಾರಿಗಳಾಗಲಿ ಕಾನೂನು ಬದ್ಧವಾಗಿ ನಿಗದಿತ ಅವಧಿಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ಮಾಡಿ ಮುಗಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬೇಕು. ಸಕಾಲಕ್ಕೆ ಕಾರ್ಯ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಥವಾ ಹಣದ ಬೇಡಿಕೆ ಇಡುವ ಕುರಿತು ದೂರು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಷಾ.ಮಿಯಾಚಂದ್ ಪ್ರಾಢಶಾಲೆಯ ಹದಗೆಟ್ಟ ಮೇಲ್ಛಾವಣಿಯನ್ನು ದುರಸ್ತಿಗೊಳಿಸಿ ಹೊಸ ಕೊಠಡಿ ನಿರ್ಮಾಣ ಕಾಮಗಾರಿ ಕೂಡಲೇ ಆರಂಭಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು. ಮಳೆಗಾಲ ಶುರುವಾಗಿದ್ದು, ಎಲ್ಲೆಲ್ಲಿ ಶಿಥಿಲಗೊಂಡ ಶಾಲೆಯ ಕೋಣೆಗಳಿವೆ ಎಂಬುದನ್ನು ಗುರುತಿಸಿ ಅದರ ಮೇಲೆ ಶಿಕ್ಷಣ ಇಲಾಖೆ ನಿಗಾ ವಹಿಸಬೇಕು. ಶಿಥಿಲ ಕೋಣೆಗಳಲ್ಲಿ ಮಕ್ಕಳನ್ನು ಕೂಡಿಸಬಾರದು. ಅಲ್ಲದೇ ಅವಶ್ಯವಿದ್ದಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಕೋರಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ನೀರು ನಿಂತು ಸೊಳ್ಳೆ ಹೆಚ್ಚಾದಲ್ಲಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಿಲಯಗಳಲ್ಲಿ ಗುಣಮಟ್ಟದ ಪಡಿತರ ಖರೀದಿಸಬೇಕು. ದೊಡ್ಡ ಗಾತ್ರದ, ಗುಣಮಟ್ಟದ ಮೊಟ್ಟೆ ಖರೀದಿಸುವಲ್ಲಿ ನಿಲಯ ಪಾಲಕರು ಕ್ರಮವಹಿಸಬೇಕು. ಪಟ್ಟಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ, ಸ್ವಚ್ಛತೆ ಕಾಪಾಡುವಲ್ಲಿ, ಸೊಳ್ಳೆ ನಿಯಂತ್ರಿಸುವಲ್ಲಿ, ಫಾಗಿಂಗ್ ಮಾಡುವಲ್ಲಿ, ಪುರಸಭಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನಕ್ಕಾಗಿ ಮನವಿ:1988-89ನೇ ಇಸವಿಯಲ್ಲಿ ಶಿಬರದಿನ್ನಿ(ಮಾರುತಿ ನಗರ) ಬಲಭಾಗದಲ್ಲಿ ಪ್ಲಾಟ್ ನೀಡುವುದಾಗಿ ಪುರಸಭೆ ಅಧಿಕಾರಿಗಳು ಹೇಳಿದ ಕಾರಣ ನಾವು ₹350 ಪಾವತಿಸಿದ್ದೇವೆ. ಅಲ್ಲದೇ ಪುರಸಭೆಯಿಂದ ಸ್ವೀಕೃತಿ ಪ್ರತಿಯನ್ನು ಪಡೆದಿದ್ದೇವೆ. ನಾವು ಶುಲ್ಕ ಪಾವತಿಸಿ 36 ವರ್ಷ ಗತಿಸಿದ್ದರು, ಈವರೆಗೂ ಕೆಲವು ಫಲಾನುಭವಿಗಳಿಗೆ ಪ್ಲಾಟ್ ದೊರೆತಿಲ್ಲ. ಫಲಾನುಭವಿಗಳಲ್ಲದವರಿಗೂ ಸಹ ಪ್ಲಾಟ್ ನೀಡಲಾಗಿದ್ದು ಅವರ ದಾಖಲೆಗಳನ್ನು ಸೂಕ್ಷ್ಮವಾಗಿ ಮರುಪರಿಶೀಲಿಸಿ ಮತ್ತು ನೊಂದ ನಮಗೆ ಪ್ಲಾಟ್ ನೀಡಿ ನ್ಯಾಯ ದೊರಕಿಸಿಕೊಡಬೇಕೆಂದು ಮಡ್ಡಿ ಶಿವಪ್ಪ, ಹೊನ್ನೂರ್ ಸಾಬ್, ಅಂಜಿನಿ, ಹಂಪ್ಪಮ್ಮ, ಹೊನ್ನೂರಮ್ಮ, ಹನುಮಂತಮ್ಮ, ರೇಣುಕಮ್ಮ, ವಿರುಪಣ್ಣ ಸೇರಿ ಇತರರು ಮನವಿ ಸಲ್ಲಿಸಿದರು.
ಈ ವೇಳೆ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದ ತಲಾ ಒಂದೊಂದು ಅರ್ಜಿ ಸಲ್ಲಿಕೆಗೊಂಡವು.ಈ ಸಂದರ್ಭ ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.