ಮಾಜಿ ಶಾಸಕರಿಂದ ಕಾಮಗಾರಿ ಮಂಜೂರು; ಹಣ ಇಲ್ಲ

| Published : Jul 05 2024, 12:53 AM IST

ಸಾರಾಂಶ

ಕ್ಷೇತ್ರದ ಅಭಿವೃದ್ದಿಗೆ ನಿಕಟಪೂರ್ವ ಶಾಸಕರ ಕೊಡುಗೆ ಶೂನ್ಯವಾಗಿದ್ದು ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಬಂದ ಅನುದಾನದಲ್ಲಿ ಅಧಿಕಾರ ನಡೆಸಿ, ಅಧಿಕಾರದ ಕೊನೆ ವರ್ಷಗಳಲ್ಲಿ ಕಾಮಗಾರಿ ಮಂಜೂರು ಮಾಡಿಸಿ ಹಣ ಬಿಡುಗಡೆ ಮಾಡಿಸದೆ ಅವಧಿ ಮುಗಿಸಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭವಾರ್ತೆ ಸಾಗರ ಕ್ಷೇತ್ರದ ಅಭಿವೃದ್ದಿಗೆ ನಿಕಟಪೂರ್ವ ಶಾಸಕರ ಕೊಡುಗೆ ಶೂನ್ಯವಾಗಿದ್ದು ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಬಂದ ಅನುದಾನದಲ್ಲಿ ಅಧಿಕಾರ ನಡೆಸಿ, ಅಧಿಕಾರದ ಕೊನೆ ವರ್ಷಗಳಲ್ಲಿ ಕಾಮಗಾರಿ ಮಂಜೂರು ಮಾಡಿಸಿ ಹಣ ಬಿಡುಗಡೆ ಮಾಡಿಸದೆ ಅವಧಿ ಮುಗಿಸಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ಎಪಿಎಂಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ಗ್ರಂಥಾಲಯ ಕಟ್ಟಡ ಹಾಗೂ ಸಬ್‌ಜೈಲ್ ಕಾಂಪೌಂಡ್ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ತಾಲೂಕು ಕಚೇರಿ, ಮೀನು ಮಾರುಕಟ್ಟೆ, ತಾಯಿ ಮಗು ಆಸ್ಪತ್ರೆ, ಎಪಿಎಂಸಿ, ಸಬ್‌ಜೈಲ್ ಹೀಗೆ ಎಲ್ಲಾ ಕಾಮಗಾರಿಗಳಿಗೂ ನಾನು ಶಾಸಕನಾದ ಮೇಲೆ ಅನುದಾನ ತಂದು ಅಭಿವೃದ್ದಿಪಡಿಸಿದ್ದೇನೆ. ಬಿಜೆಪಿಗರು ತಮ್ಮ ಶಾಸಕರು ಅನುದಾನ ತಂದಿದ್ದರೆಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಾಮಗಾರಿ ಮಂಜೂರು ಮಾಡಿಸುವುದೇ ಅಭಿವೃದ್ದಿ ಅಲ್ಲ. ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದಾಗ ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಜೋಗ ಅಭಿವೃದ್ಧಿಗೆ ಯಡಿಯೂರಪ್ಪ ೧೮೦ ಕೋಟಿ ರು. ವೆಚ್ಚದಲ್ಲಿ ಚಾಲನೆ ನೀಡಿದರು. ಆದರೆ ಹಣ ಕೊಟ್ಟಿಲ್ಲ. ನಮ್ಮ ಸರ್ಕಾರ ೭೨ ಕೋಟಿ ರು. ಕೊಟ್ಟಿದೆ. ಜೋಗ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ, ರಾಘವೇಂದ್ರ, ಹಾಲಪ್ಪರ ಕೊಡುಗೆ ಏನೂ ಇಲ್ಲ. ಸದ್ಯದಲ್ಲಿಯೆ ಜೋಗವನ್ನು ವಿಶ್ವದರ್ಜೆ ಪ್ರವಾಸಿ ತಾಣವಾಗಿಸುವ ಯೋಜನೆ ರೂಪಿಸಲಾಗಿದೆ. ರೈನ್ಡ್ಯಾನ್ಸ್, ಈಜುಕೊಳ, ಜಿಪ್ವೇ, ಸ್ಕೂಬಾ ಡೈವಿಂಗ್, ರೋಪ್ವೇ ಸೇರಿದಂತೆ ಪ್ರವಾಸಿ ಆಕರ್ಷಕ ಸೌಲಭ್ಯ ನೀಡಲಾಗುತ್ತದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಮಲ ಮಾದರಿಯ ಪ್ರವಾಸಿದ್ವಾರ ನಿರ್ಮಿಸಲು ಚಿಂತನೆ ನಡೆಸಲಾಗಿತ್ತು. ಅದನ್ನು ತೆಗೆದು ಸುಂದರವಾದ ಕಮಾನು ರೂಪಿಸಲಾಗುತ್ತಿದೆ ಎಂದರು. ೨೦೦೮-೦೯ರಲ್ಲಿ ನಾನು ಶಾಸಕನಾಗಿದ್ದಾಗ ಒಳಚರಂಡಿ ಕಾಮಗಾರಿಗೆ ೭೦ ಕೋಟಿ ರು. ಅನುದಾನ ತಂದಿದ್ದೆ. ನಂತರ ಯಾರೂ ಒಳಚರಂಡಿ ಕಾಮಗಾರಿ ಬಗ್ಗೆ ಆಸಕ್ತಿ ವಹಿಸಿಲ್ಲ. ಮತ್ತೆ ಸರ್ಕಾರದ ಮೇಲೆ ಒತ್ತಡ ಹೇರಿ ೩೪ ಕೋಟಿ ರು. ಮಂಜೂರು ಮಾಡಿಸಲಾಗಿದೆ. ಇದರ ಜೊತೆಗೆ ಜೋಗದ ಯೂತ್ ಹಾಸ್ಟೆಲ್ ಅಭಿವೃದ್ದಿಗೆ ೯೦ ಲಕ್ಷ ರು. ಮಂಜೂರಾಗಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ೫ ಕೋಟಿ ರು. ಮಂಜೂರಾಗಿದ್ದು ಜಾಗ ಗುರುತಿಸಲಾಗುತ್ತಿದೆ. ಜೈಲ್ ಗೋಡೆ ನಿರ್ಮಾಣಕ್ಕೆ ೧.೩೦ ಕೋಟಿ ರು. ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆ ಚರಂಡಿ ನಿರ್ಮಾಣಕ್ಕೆ ೨.೫೦ ಕೋಟಿ ರು. ಗ್ರಂಥಾಲಯ ಅಭಿವೃದ್ಧಿಗೆ ೫೦ ಲಕ್ಷ ರು. ಮೀನು ಮಾರುಕಟ್ಟೆ ಅಭಿವೃದ್ಧಿಗೆ ೧.೨೦ ಕೋಟಿ ರು. ಈಜುಕೊಳ ಅಭಿವೃದ್ಧಿಗೆ ೨೦ ಲಕ್ಷ ರು. ಮಂಜೂರಾಗಿದೆ.

ಬಿಜೆಪಿಯವರು ಹೇಳುವಂತೆ ಈ ಯಾವ ಅನುದಾನವೂ ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದಲ್ಲ. ಅನುದಾನದ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಗರು ಮಾಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಗಣಪತಿ ಮಂಡಗಳಲೆ, ಕೆ.ಹೊಳೆಯಪ್ಪ, ಕಲಸೆ ಚಂದ್ರಪ್ಪ, ಆನಂದ್ ಭೀಮನೇರಿ, ಟಿ.ಪಿ.ರಮೇಶ್, ಬಸವರಾಜ ಸೈದೂರು, ಯಶವಂತ ಪಣಿ, ಐ.ಜಿ.ಸ್ವರೂಪ್, ತಾರಾಮೂರ್ತಿ ಇನ್ನಿತರರು ಹಾಜರಿದ್ದರು.