ಒಂದಕಿ ಸ್ಥಾನಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿ

| Published : Dec 01 2024, 01:30 AM IST

ಸಾರಾಂಶ

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಾಗ ಮುಜುಗರಕ್ಕೆ ಈಡಾಗುವ ಸಂದರ್ಭ ಬರುತ್ತದೆ, ನಮ್ಮ ಶಿಕ್ಷಣದ ಕುರಿತು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ

ಗದಗ: ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸಿ ಜಿಲ್ಲೆಯನ್ನು ಒಂದಕಿ ಸ್ಥಾನಕ್ಕೆ ತರಬೇಕು ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಜಿಲ್ಲಾ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಾಗ ಮುಜುಗರಕ್ಕೆ ಈಡಾಗುವ ಸಂದರ್ಭ ಬರುತ್ತದೆ, ನಮ್ಮ ಶಿಕ್ಷಣದ ಕುರಿತು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಶಿಕ್ಷಕರು ಪ್ರಾಮಾಣಿಕ ಹಾಗೂ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಕಾರ್ಯಕ್ರಮದ ಪಟ್ಟಿ ಗಮನಿಸಿದರೆ ಎಲ್ಲ ಶಿಕ್ಷಕರು ಸಮಯ ಮೀರಿ ಕೆಲಸ ಮಾಡುತ್ತಿದ್ದಾರೆ. ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಲಾಗಿದೆ. ಅಧಿಕಾರಿಗಳು ಮಾರ್ಗದರ್ಶನ ನೀಡಿ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡಬೇಕಾಗಿದೆ. ತಾಲೂಕು ವಾರು ವಿಷಯವಾರು ಸಭೆ ಸಂಘಟನೆ ಮಾಡಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಶಿಕ್ಷಕರು ಮಾದರಿ ಪರೀಕ್ಷೆ ತಯಾರು ಮಾಡಿ ಮಕ್ಕಳ ಪ್ರಗತಿಗೆ ಗಮನ ನೀಡಿದ್ದಾರೆ. ಅಕ್ಟೋಬರ್ ರಜಾ ಅವಧಿಯಲ್ಲಿ ವಿಶೇಷ ತರಗತಿ ನಡೆಸಲಾಗಿದೆ. ಶಿಕ್ಷಕರು ಪೋಷಕರ ಒಳಗೊಂಡು ಆಪ್ತ ಸಮಾಲೋಚನೆ ಮಾಡಿ ವೈಯಕ್ತಿಕ ಕಾಳಜಿ ವ್ಯಕ್ತಪಡಿಸಿ ಪ್ರತಿ ಸೋಮವಾರ ಪಾಲಕರ ಸಭೆ, ಮೂರನೇ ಸೋಮವಾರ ತಾಯಂದಿರ ಜತೆ ಸಭೆ ಮಾಡಿ ಪ್ರತ್ಯೇಕ ಸಭೆ ಮಾಡಿರುವುದು ಮೆಚ್ಚುವಂತದ್ದು ಹಾಗೂ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಸಂಪೂರ್ಣ ಸಹಕಾರ ನೀಡಿದೆ ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕಲಿಯುವ ಅವಶ್ಯಕತೆ ಇರುವ ಮಕ್ಕಳು ಖಂಡಿತವಾಗಿ ಶಾಲೆಗೆ ತಪ್ಪದೇ ಬರುತ್ತಾರೆ. ಶಿಕ್ಷಕರು ಆಸಕ್ತಿಯಿಂದ ಪಾಠ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸಬೇಕು.

ಶೈಕ್ಷಣಿಕ ಕ್ಷೇತ್ರದಲ್ಲಿ ಮೂಲ ಸಮಸ್ಯೆ ಕಂಡು ಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು, ಶಿಕ್ಷಕರು ಮಾನಸಿಕವಾಗಿ ನೆಮ್ಮದಿಯಿಂದ ಇದ್ದಾಗ ಮಾತ್ರ ಉತ್ತಮ ಪಾಠ ಬೋಧನೆ ಆಗುತ್ತದೆ. ಕನಿಷ್ಟ ಒಂದು ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡುವುದರ ಜತೆಗೆ ಆ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಇನ್ನಷ್ಟು ಆಗಲಿ. ಮಕ್ಕಳು ಹಿರಿಯರಿಗೆ ಗೌರವ ನೀಡುವಂತಹ ಸಂಸ್ಕಾರಯುತ ಶಿಕ್ಷಣ ವನ್ನು ಪಡೆಯುವಂತಾಗಬೇಕು ಎಂದರು.

ವಿಪ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಫಲಿತಾಂಶ ಬಂದಾಗ ಕಡಿಮೆಯಾದ ಸಂದರ್ಭದಲ್ಲಿ ಟೀಕೆ ಟಿಪ್ಪಣಿಗಳನ್ನು ಶಿಕ್ಷಕರ ಮೇಲೆ ಹೊರಿಸುತ್ತಾರೆ. ಫಲಿತಾಂಶ ಕಡಿಮೆ ಆಗಲು ಕೇವಲ ಶಿಕ್ಷಕರು ಮಾತ್ರ ಕಾರಣವಲ್ಲ. ಮಗುವಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಮೌಲ್ಯಯುತ ಶಿಕ್ಷಣ ನೀಡಿದಾಗ ಅಂತಹ ಮಗು ಮುಂದಿನ ವ್ಯಾಸಂಗದಲ್ಲಿಯೂ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಪರೀಕ್ಷಾ ಫಲಿತಾಂಶ ಸುಧಾರಿಸಲು ಶಿಕ್ಷಕರು ಪೂರ್ವ ತಯಾರಿ ಮಾಡಿಕೊಂಡು ಪರಿಣಾಮಕಾರಿ ಬೋಧನೆ ಮಾಡಬೇಕು. ಪಿಯುಸಿ ಫಲಿತಾಂಶ ಸುಧಾರಣೆಗೂ ಈ ರೀತಿಯ ಕಾರ್ಯಾಗಾರ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ್‌ ಕಾರ್ಯಾಗಾರದ ಕುರಿತು ಮಾತನಾಡಿದರು.

ಡಿಡಿಪಿಐ ಆರ್.ಎಸ್. ಬುರಡಿ, ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ, ವಿದ್ಯಾದಾನ ಶಿಕ್ಷಣ ಸಮಿತಿ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್, ಜಿ.ಎಲ್. ಬಾರಾಟಕ್ಕೆ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.