ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಮೂಲಕ ಮಂಗಳವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಸಿ ಯಾವುದೇ ರೀತಿಯ ಸಾಕ್ಷಿ ಆಧಾರಗಳು ಇಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಧರ್ಮ ವಿರೋದಿಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜಕ್ಕೆ ಹಾಗೂ ಬಡವರ ಉದ್ದಾರಕ್ಕೆ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನು ಸಹಿಸದ ಧರ್ಮವಿರೋದಿಗಳ ಗುಂಪು ಷಡ್ಯಂತರ ರೂಪಿಸಿ ಸಂಬಂಧ ಇಲ್ಲದ ಯಾವುದೋ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಅಲ್ಲದೆ ಯಾವುದೇ ರೀತಿಯ ಸಾಕ್ಷಿ ಆಧಾರಗಳು ಇಲ್ಲದೆ ಇದ್ದರು ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ದ ಅಪಪ್ರಚಾರ ನಡೆಸುತ್ತಿದ್ದು ಇದರಿಂದ ಶ್ರೀ ಕ್ಷೇತ್ರದ ಭಕ್ತರಿಗೆ ಅಪಾರವಾದ ನೋವು ಉಂಟಾಗಿದೆ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ದ ಅಪಪ್ರಚಾರ ನಡೆಸುತ್ತಿರುವ ಧರ್ಮವಿರೋದಿಗಳ ವಿರುದ್ಧ ಸರ್ಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಧರ್ಮಸ್ಥಳ ಅಭಿಮಾನಿ ವೇದಿಕೆಯ ಕಾರ್ಯಾಧ್ಯಕ್ಷ ನಾಗರಾಜ್ ಸಂಗಮ್ ಮಾತನಾಡಿ, ಹಿಂದುಗಳ ಶ್ರದ್ಧಾಕೇಂದ್ರ ಧರ್ಮಸ್ಥಳದಲ್ಲಿ ತನಿಖೆಯ ಹೆಸರಲ್ಲಿ ನಡೆಯುತ್ತಿರುವ ಧರ್ಮದ್ರೋಹಿ ಚಟುವಟಿಕೆಗಳು ಕೂಡಲೇ ಸ್ಥಗಿತಗೊಳ್ಳಬೇಕು. ಎಸ್‍ಐಟಿ ನಡೆಸುತ್ತಿರುವ ತನಿಖೆ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶ್ರದ್ಧೆಗೆ ಅಪಚಾರ ಎಸಗುವಂತಿದೆ. ಅಸಮರ್ಪಕವಾದ ತನಿಖೆಯನ್ನು ಕೂಡಲೇ ಸ್ಥಗಿತಗೊಳಿಸಿ ಇಲ್ಲಿಯವರೆಗೆ ನಡೆಸಿರುವ ತನಿಖೆಯ ಕುರಿತು ಮಧ್ಯಂತರ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪಿಎಫ್‍ಐ ಸೇರಿದಂತೆ ಮತಾಂಧ ಶಕ್ತಿಗಳು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದು ಸದ್ಯ ನಡೆಯುತ್ತಿರುವ ತನಿಖೆ ಕೂಡ ಅದಕ್ಕೆ ಪುಷ್ಟಿ ಕೊಡುವಂತಿದೆ. ಅನಾಮಿಕ ದೂರುದಾರನ ಹೆಸರಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವದೆ ಮಾಡಲಾಗುತ್ತಿದೆ. ಸರ್ಕಾರದ ಇಂತಹ ವ್ಯವಸ್ಥೆ ಧರ್ಮಸ್ಥಳದ ಅಸಂಖ್ಯಾತ ಭಕ್ತರು ಹಾಗೂ ಹಿಂದುಗಳಿಗೆ ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣ ಸರ್ಕಾರ ಧರ್ಮಸ್ಥಳ ಕ್ಷೇತ್ರದ ಗೌರವ ಸಂರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಇಂದಿನ ಹೋರಾಟ ಬರೀ ಸ್ಯಾಂಪಲ್ ಅಷ್ಟೇ. ರಾಜ್ಯಾದ್ಯಂತ 1 ಕೋಟಿಗೂ ಹೆಚ್ಚು ಜನ ಸೇರಿ ಪ್ರತೀ ತಾಲೂಕಿನಲ್ಲೂ ಅಪಪ್ರಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಹಿಂದೂಗಳು ತಿರುಗಿನಿಂತರೆ ಪರಿಣಾಮ ಬೇರೆಯೇ ಆಗುತ್ತದೆ. ಧರ್ಮಸ್ಥಳವನ್ನು ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.
ಧರ್ಮಸ್ಥಳ ಅಭಿಮಾನಿ ವೇದಿಕೆಯ ಅದ್ಯಕ್ಷರಾದ ರೂಪಾ ಜನಾರ್ಧನ್ ಮಾತನಾಡಿ, ಎಲ್ಲರಿಗೂ ಒಳಿತನ್ನು ಬಯಸುವ ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಅನಾಮಿಕನ ಹೆಸರಿನಲ್ಲಿ ಮಾನಸಿಕ ತೊಂದರೆ ಕೊಡುತ್ತಿದ್ದು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಎಲ್ಲಾ ದುಷ್ಟಶಕ್ತಿಗಳಿಗೂ ತಕ್ಕ ಉತ್ತರ ಹಿಂದೂಗಳು ನೀಡುತ್ತಾರೆ ಎಂದರು.ಈ ವೇಳೆ ಶ್ರೀ ಧರ್ಮಸ್ಥಳ ಅಭಿಮಾನಿ ವೇದಿಕೆಯ ಕಾರ್ಯಾಧ್ಯಕ್ಷರಾದ ಸಿ.ಬಿ.ನಾಗರಾಜ್, ದೇವರಾಜು, ಅರಸು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಘು ಚಂದನ್, ವೀರಶೈವ ಮುಖಂಡರಾದ ಕೆಇಬಿ ಷಣ್ಮುಖಪ್ಪ, ಜೀತೇಂದ್ರ ಹುಲಿಕುಂಟೆ, ಲೀಲಾಧರ್ ಠಾಕೂರ್, ತಿಮ್ಮಣ್ಣ ಸೇರಿದಂತೆ ಅಪಾರ ಭಕ್ತ ವೃಂದದವರು ಹಾಜರಿದ್ದರು.