ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡಿ

| Published : Oct 13 2025, 02:00 AM IST

ಸಾರಾಂಶ

ಮಕ್ಕಳನ್ನು ದಡ್ಡರು ಎಂದು ಕೈತೊಳೆದು ಕೊಳ್ಳವ ಸಂಸ್ಕೃತಿ ಬಿಟ್ಟು, ಅವರನ್ನು ಜವಾಬ್ದಾರಿಯಿಂದ ವಿದ್ಯಾವಂತರನ್ನಾಗಿ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಸರ್ಕಾರ ಜವಾಬ್ದಾರಿಯಿಂದ ಶಿಕ್ಷಣಕ್ಕೆ ಸಕಲ ಸವಲತ್ತುಗಳನ್ನು ಒದಗಿಸಿದೆ ಪ್ರಾಮಾಣಿಕತನ ಹಾಗೂ ಶ್ರದ್ಧೆಯಿಂದ ಪಾಠ ಮಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಕರಿಗೆ ಸಲಹೆ ನೀಡಿದರು.

ಆನವಟ್ಟಿ: ಮಕ್ಕಳನ್ನು ದಡ್ಡರು ಎಂದು ಕೈತೊಳೆದು ಕೊಳ್ಳವ ಸಂಸ್ಕೃತಿ ಬಿಟ್ಟು, ಅವರನ್ನು ಜವಾಬ್ದಾರಿಯಿಂದ ವಿದ್ಯಾವಂತರನ್ನಾಗಿ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಸರ್ಕಾರ ಜವಾಬ್ದಾರಿಯಿಂದ ಶಿಕ್ಷಣಕ್ಕೆ ಸಕಲ ಸವಲತ್ತುಗಳನ್ನು ಒದಗಿಸಿದೆ ಪ್ರಾಮಾಣಿಕತನ ಹಾಗೂ ಶ್ರದ್ಧೆಯಿಂದ ಪಾಠ ಮಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಕರಿಗೆ ಸಲಹೆ ನೀಡಿದರು.

ಭಾನುವಾರ ಪಟ್ಟಣದ ಕೆಪಿಎಸ್‌ ಕಾಲೇಜು ವಿಭಾಗ ಹಮ್ಮಿಕೊಂಡಿದ್ದ ನಬಾರ್ಡ್‌ ಯೋಜನೆಯ 1.58 ಕೋಟಿ ರು. ವೆಚ್ಚದ ನೂತನ ಕಟ್ಟಡದ ಉದ್ಘಾಟನೆ ಹಾಗೂ ವಿವೇಕಾ ಯೋಜನೆಯ 2.45 ಕೋಟಿ ರು. 10 ಕೊಠಡಿಗಳ ಭೂಮಿ ಪೂಜೆ, ಜಿಲ್ಲಾ ಪಂಚಾಯಿತಿಯ 45 ಲಕ್ಷ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಆನವಟ್ಟಿಯ ಕೆಪಿಎಸ್‌ ಶಾಲೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ನಮಗೆ ಹೆಮ್ಮೆ ಎನ್ನಿಸಿದೆ. ಈ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯ ಒದಗಿಸುವುದು ಕೂಡ ಮುಖ್ಯವಾಗಿದ್ದು, ಸಂಬಂಧಿಸಿದ ಇಲಾಖೆಯ ಸಚಿವರೊಂದಿಗೆ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಅಗತ್ಯ ಹಾಸ್ಟೇಲ್‌ಗಳನ್ನು ಒದಗಿಸಲಾಗವುದು ಎಂದರು.

ಅಡಿಟೋರಿಯಂಗೆ ಜಯಪ್ಪ ಹೆಸರು:

3000 ಮಕ್ಕಳಿಗೆ ಬೃಹತ್‌ ಅಡಿಟೋರಿಯಂಗೆ ಯೋಜನೆ ಸಿದ್ಧವಾಗಿದ್ದು, ಈ ಕಾಲೇಜಿಗೆ ಗಟ್ಟಿಬುನಾದಿ ಹಾಕಿ, ರಾಜ್ಯದಲ್ಲೇ ಒಳ್ಳೇ ಹೆಸರು ಮಾಡಲು ಕಾರಣರಾದ ನಿವೃತ್ತ ಪ್ರಾಂಶುಪಾಲ ಎಚ್‌.ಜಯಪ್ಪ ಅವರ ಹೆಸರನ್ನೇ ಅಡಿಟೋರಿಯಂಗೆ ಇಡಲಾಗುವುದು ಎಂದು ತಿಳಿಸಿದರು.

ತಾನು ಕಲಿತ ಶಾಲೆಗೆ 20 ಲಕ್ಷ ರು. ದೇಣಿಗೆ ನೀಡಿ ಅದರಲ್ಲಿ 15 ಲಕ್ಷ ರು. ವೆಚ್ಚದ ಶುದ್ಧ ಕಡಿಯುವ ನೀರಿನ ಘಟಕ ನಿರ್ಮಿಸಿರುವ ಹಳೆ ವಿದ್ಯಾರ್ಥಿ ಹಾಗೂ ಕುಬಟೂರು ಗ್ರಾಮದ ನಿವಾಸಿ ಶಿವಪ್ರಕಾಶ್‌ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿವರೆಗೆ ಇದ್ದದ್ದು 308 ಕೆಪಿಎಸ್‌ ಮಾದರಿ ಶಾಲೆಗಳು ಮಾತ್ರ. ಈ ವರ್ಷ ಸಿದ್ದರಾಮಯ್ಯನವರ ಸಹಕಾರದಿಂದ ರಾಜ್ಯದಲ್ಲಿ 800 ಕೆಪಿಎಸ್‌ ಶಾಲೆಗಳನ್ನು ತೆರೆಯಲಾಗುತ್ತಿದೆ. ನನ್ನ ಅವಧಿಯಲ್ಲಿ ಐದು ಸಾವಿರ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ನಾಲ್ಕು ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯಲಾಗಿದೆ. ಹಂತ-ಹಂತವಾಗಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಒಂದು ಕೆಪಿಎಸ್‌ ಶಾಲೆ ಇರುವಂತೆ 5 ಸಾವಿರ ಕೆಪಿಎಸ್‌ ಶಾಲೆ ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪೂರಕ ಪರೀಕ್ಷೆ ಬಡ ಮಕ್ಕಳಿಗೆ ಹೊರೆಯಾಗಬಾರದು ಎಂದು ಪರೀಕ್ಷೆ ಶುಲ್ಕವನ್ನು ಉಚಿತ ಮಾಡಲಾಗಿದೆ. ನವೆಂಬರ್‌ ತಿಂಗಳಲ್ಲಿ ಪೋಷಕರಿಗೆ ಸಂತಸವಾಗುವಂತಹ ಕೊಡುಗೆಯನ್ನು ಸರ್ಕಾರ ಪ್ರಕಟಿಸಲಿದೆ ಕಾದು ಎಂದು ವಿಶ್ವಾಸಭರಿತವಾಗಿ ಮಾತನಾಡಿದರು.

ಪ್ರಾಂಶುಪಾಲ ಟಿ.ಜಗದೀಶ್‌ ಮಾತನಾಡಿದರು.

ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಶುಂಠಿ, ಉಪ ಪ್ರಾಂಶುಪಾಲ ಎಂ,ಮಹಾದೇವಪ್ಪ, ಬಿಇಒ ಆರ್‌.ಪುಷ್ಪಾ, ಡಿಡಿಪಿ ಎಸ್‌.ಚಂದ್ರಪ್ಪ, ಇಒ ಶಶಿಧರ್‌, ಮುಖಂಡರಾದ ಕೆ.ಪಿ.ರುದ್ರಗೌಡ, ಜರ್ಮಲೆ ಚಂದರಶೇಖರ್‌, ಸದಾನಂದ ಗೌಡ ಬಿಳಗಲಿ, ಕಡ್ಲೇರ್‌ ರುದ್ರಪ್ಪ, ಆರ್‌.ಸಿ.ಪಾಟೀಲ್‌, ಸುರೇಶ್‌ ಹಾವಣ್ಣನವರ್‌, ಶಿವಲಿಂಗೇಗೌಡ, ದ್ರಾಕ್ಷಾಯಿಣಿ ಮಾಲತೇಶ್‌ ಇದ್ದರು.