ಸಾರಾಂಶ
ಶಿಗ್ಗಾಂವಿ: ಚುನಾವಣೆಯ ನಂತರ ರಾಜಕೀಯ ಬಿಟ್ಟು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ವಿಷಯದಲ್ಲಿ ಪ್ರತಿ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ತಿಳಿಸಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಸರ್ವ ಸಮುದಾಯದ ಜನರ ಬೇಕು ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೀಗಾಗಿ ಶಿಗ್ಗಾಂವಿ, ಸವಣೂರ, ಬಂಕಾಪುರ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರು ಸರಬರಾಜಿಗಾಗಿ ಸರ್ಕಾರ ₹೩೫೧ ಕೋಟಿ ಅನುದಾನ ನೀಡಲು ಅನುಮೋದನೆ ನೀಡಿದೆ. ಅದರಲ್ಲಿ ಕೇಂದ್ರದ ಪಾಲಿಲ್ಲ. ತಪ್ಪು ಸಂದೇಶ ಜನರಿಗೆ ಹೋಗಬಾರದು. ರಾಜ್ಯ ಸರ್ಕಾರದಿಂದ ಮಾತ್ರ ಈ ಹಣ ಬಿಡುಗಡೆಯಾಗಿದೆ ಎಂದರು.ಹಿಂದಿನ ಸರ್ಕಾರದಲ್ಲಿ ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಅವುಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಾವುದೇ ಕಾಮಗಾರಿಗಳನ್ನು ರದ್ದುಪಡಿಸಿಲ್ಲ. ೪೦೦ ದೇವಸ್ಥಾನಗಳಿಗೆ ಅನುದಾನ ನೀಡಿದ್ದೇನೆ. ೩ ಪುರಸಭೆಗಳಿಗೆ ತಲಾ ₹೧೦ ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಅಲ್ಲದೆ ಸದ್ಯದಲ್ಲಿ ಸವಣೂರು ಏತ ನೀರಾವರಿ ಯೋಜನೆ ಜಾರಿಗೆ ತರುತ್ತೇನೆ. ಶಿಶುವಿನಹಾಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಹಿಂದಿನ ಠರಾವಿದಲ್ಲಿ ಕಸಾಪ ಮತ್ತು ಪರ್ತಕರ್ತರ ಭವನಕ್ಕೆ ೪ ಗುಂಟೆ ಜಾಗೆ ಮಂಜೂರಾತಿ ನೀಡಲಾಯಿತು. ಸಂತೆ ಮೈದಾನದ ಅಭಿವೃದ್ಧಿ ಆಗಿಲ್ಲ. ಹಿಂದೆ ಪಟ್ಟಣದ ಅಭಿವೃದ್ಧಿಗೆ ಮಂಜೂರಾಗಿದ್ದ ₹೧೪ ಕೋಟಿ ಅನುದಾನದಲ್ಲಿ ₹೧.೫ ಕೋಟಿ ಅನುದಾನ ಸಂತೆ ಮೈದಾನಕ್ಕೆ ಬಿಡುಗಡೆ ಆಗಿತ್ತು. ಅದನ್ನು ಬೇರೆ ಕೆಲಸಕ್ಕೆ ಖರ್ಚು ಮಾಡಿರುವ ಕಾರಣ ಈ ಕೆಲಸ ಸ್ಥಗಿತಗೊಂಡಿದೆ. ತಕ್ಷಣ ಸಂತೆ ಮೈದಾನದ ಕಾಮಗಾರಿ ಕೈಗೊಳ್ಳಬೇಕು ಎಂದು ಸದಸ್ಯ ದಯಾನಂದ ಅಕ್ಕಿ ಕೋರಿದರು. ಹಿಂದೆ ಬಿಡುಗಡೆಯಾದ ಅನುದಾನದಲ್ಲಿ ಕೆಲವು ಕಾಮಗಾರಿಗಳನ್ನು ಕೈಗೊಳ್ಳುವಾಗ ಸರ್ವ ಸದಸ್ಯರ ಗಮನಕ್ಕೆ ತಂದು ಬದಲಾವಣೆ ಮಾಡಲಾಗಿದೆ. ಆದರೆ ಆ ಅನುದಾನ ಎಲ್ಲಿ ಹೋಯಿತು ಎಂದು ಕೇಳಿದರೆ ಈಗ ಏನು ಹೇಳಬೇಕು ಎಂದು ಮಾಜಿ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ತಿಳಿಸಿದರು. ನಾಗನೂರ ಕೆರೆ, ರಾಚನಕಟ್ಟಿ ಕೆರೆಗಳಿಗೆ ವರ್ಷವಿಡೀ ನೀರು ಬರುವಂತೆ ಮಾಡಬೇಕು. ಸುತ್ತಲೂ ಉದ್ಯಾನವನ ನಿರ್ಮಾಣವಾಗಬೇಕು ಎಂದು ಸದಸ್ಯ ಸುಲೇಮಾನ್ ತರ್ಲಘಟ್ಟ ತಿಳಿಸಿದರು.ಪಟ್ಟಣದ ಕೊಳಚೆ ನೀರು ರೈತರ ಜಮೀನಿಗೆ ನುಗ್ಗಿ ಸುಮಾರು ೨೦ ಎಕರೆಗಿಂತ ಹೆಚ್ಚಿನ ಜಮೀನು ಹಾಳಾಗುತ್ತಿದೆ. ತ್ಯಾಜ್ಯವಸ್ತು, ಗಾಜು ಬಾಟಲಿಗಳು ಸಿರಿಂಜ್‌ಗಳು ಜಮೀನಿನಲ್ಲಿ ತುಂಬಿವೆ. ಹೀಗಾಗಿ ರೈತರು ಅವುಗಳನ್ನು ಸ್ವಚ್ಛ ಮಾಡುವುದರಲ್ಲಿ ಸಾಕಾಗಿ ಹೋಗಿದೆ. ತಕ್ಷಣ ಅದನ್ನು ಸರಿಪಡಿಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು.ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಾಬಾಯಿ ಸುಭೇದಾರ, ಮಾಜಿ ಅಧ್ಯಕ್ಷರಾದ ಶ್ರೀಕಾಂತ ಬುಳ್ಳಕ್ಕನವರ, ಪರಶುರಾಮ ಸೋನ್ನದ, ಮಾಜಿ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್., ಎಂಜಿನಿಯರ್ ನಾಗರಾಜ ಮಿರ್ಜಿ ಸೇರಿದಂತೆ ಎಲ್ಲ ಸದಸ್ಯರು ಇದ್ದರು.