ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗೆ ಹೇಮಾವತಿ ನಾಲಾ ಕಾಮಗಾರಿಯನ್ನು ಭಾನುವಾರದೊಳಗೆ ಸಂಪೂರ್ಣಗೊಳಿಸುವುದಾಗಿ ಹೇಮಾವತಿ ನಾಲಾ ಚೀಫ್ ಎಂಜಿನಿಯರ್ ಹಾಗೂ ಶಾಸಕರು ನೀರಾವರಿ ಹೋರಾಟ ಸಮಿತಿಯವರಿಗೆ ಭರವಸೆ ನೀಡಿದರು. ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಕಳೆದ ಐದು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೇಮಾವತಿ ನಾಲಾ ಕಾಮಗಾರಿ ಹೋರಾಟದ ಸ್ಥಳಕ್ಕೆ ಸೋಮವಾರ ರಾತ್ರಿ ಹೇಮಾವತಿ ನಾಲಾ ಚೀಫ್ ಎಂಜಿನಿಯರ್‌ ಫಣಿರಾಜ್ನೊಂದಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮಾತುಕತೆ ನಡೆಸಿ ಸತ್ಯಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ ಶಾಸಕ ಸಿ.ಬಿ.ಸುರೇಶ್‌ಬಾಬು ಹಳೆಯ ಗ್ಯಾರೇಹಳ್ಳಿ ಭಾಗದ ಚಾನಲ್‌ನಲ್ಲಿನ ಹೂಳನ್ನು ತೆಗೆಯಲಾಗಿದೆ ಇನ್ನು ಚಿಕ್ಕಪುಟ್ಟ ಸರಿಪಡಿಸುವಂತಹ ಕೆಲಸ ಹಾಗೂ ಮನುಷ್ಯರಿಂದ ಮಾಡುವಂತಹ ಕೆಲಸಗಳನ್ನು ಮಾಡಿ ನಂತರದಲ್ಲಿ ಉಳಿದಿರುವ ಚಿಕ್ಕನಾಯಕನಹಳ್ಳಿ ಭಾಗದ ಕಾಮಗಾರಿಯನ್ನು ಎಲ್ಲಾ ಯಂತ್ರಗಳನ್ನು ಬಳಸಿ ಸಾದ್ಯವಾದಷ್ಟು ಬೇಗ ಮುಗಿಸುವಂತೆ ತಿಳಿಸಿದರು. ಹೇಮಾವತಿ ಚೀಫ್ ಇಂಜನಿಯರ್ ಫಣಿರಾಜ್ ಮಾತನಾಡಿ ಮುಂದಿನ ಭಾನುವಾರದೊಳಗೆ ದಬ್ಬೇಘಟ್ಟದ ವರೆಗೆ ಸಂಪೂರ್ಣಗೊಳಿಸಿ ನವಿಲೇ ಕೆರೆಗೆ ಹರಿಸಲಾಗುವುದು. ನಂತರ ಚಿಕ್ಕನಾಯಕನಹಳ್ಳಿ ಭಾಗದಲ್ಲಿ ೧.೫ಕಿ.ಮೀ ಕಾಮಗಾರಿ ಆಗ ಬೇಕಿದ್ದು ಎರಡು ಸೇತುವೆ ಮಾಡಬೇಕು ಅದ್ದರಿಂದ ಸ್ವಲ್ಪ ತಡವಾಗುತ್ತದೆ ಹಾಗೂ ಮಾರ್ಚ್‌ ೨೭ರವರೆಗೆ ಇವರಿಗೆ ಅವಕಾಶವಿದ್ದು ಅಷ್ಟರಲ್ಲಿ ಮುಗಿಸುವುದಾಗಿ ತಿಳಿಸಿದರು. ನೀರಾವರಿ ಹೋರಾಟ ಸಮಿತಿ ಅದ್ಯಕ್ಷ ಶ್ಯಾವಿಗೆಹಳ್ಳಿ ಮಧು ಮಾತನಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ ಎಂ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ಎಇಇ ಪ್ರಭಾಕರ್, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಆಟೋಚಾಲಕರ ಸಂಘದ ಮುಖಂಡ ಮಂಜುನಾಥ್, ಮರಳುಸಿದ್ದಯ್ಯ, ರಮೇಶ್ ಮತ್ತಿತರರು ಇದ್ದರು.