ಸಾರಾಂಶ
ಹಾನಗಲ್ಲ: ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿದ್ದ ಘಟನೆ ತಿರುವು ಪಡೆದುಕೊಂಡಿದ್ದು, ನಾಲ್ವರು ರೈತರು ತಮ್ಮ ಕೊಳವೆಬಾವಿಗಳಿಗೆ ಎರಡು ಕಡೆಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಶನಿವಾರ ಪಟ್ಟಣದ ಹೆಸ್ಕಾಂ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯುತ್ ಗುತ್ತಿಗೆದಾರರು ಹಾಗೂ ಲೈನ್‌ಮನ್‌ಗಳು ತಪ್ಪಿತಸ್ಥ ರೈತರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಗುತ್ತಿದಾರರು ಕಾಡಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕಾಮಗಾರಿಗಾಗಿ ಇದೇ ಗ್ರಾಮದ ಸಹದೇವ ಹುಡೇದ ಎಂಬ ಕಾರ್ಮಿಕನನ್ನು ಕರೆತಂದಿದ್ದರು. ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯ ಸೆಕ್ಷನ್ ಆಫೀಸರ್ ಎಲ್‌ಸಿ ನೀಡಿದ್ದರಾದರೂ, ವಿದ್ಯುತ್ ಕಂಬದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಕಾರ್ಮಿಕ ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ಘಟನೆಯ ಕುರಿತಂತೆ ಗುತ್ತಿಗೆದಾರ ಕಾರ್ಮಿಕನ ಕುಟುಂಬದವರಿಗೆ ₹7 ಲಕ್ಷ ಪರಿಹಾರ ನೀಡಿದ್ದರು. ಆದರೆ ಈ ಘಟನೆಗೆ ಕಾರಣವೇನು? ಎಂಬುದನ್ನು ಲೈನ್‌ಮನ್‌ಗಳು ಪರೀಶೀಲಿಸಿದಾಗ ಈ ಫೀಡರ್‌ನಲ್ಲಿರುವ ನಾಲ್ವರು ರೈತರು ತಮ್ಮ ಕೊಳವೆಬಾವಿಗಳಿಗೆ ಎರಡು ಕಡೆಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು. ವಿಜೆಲೆನ್ಸ್ ವಿಭಾಗದವರಿಗೂ ಈ ವಿಷಯವನ್ನು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಅವರು ಸ್ಥಳಕ್ಕೆ ಬಾರದಿದ್ದುದು ಗುತ್ತಿಗೆದಾರರು ಹಾಗೂ ಲೈನ್‌ಮನ್‌ಗಳ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸದ ಹೊರತೂ ಕೆಲಸಕ್ಕೆ ತೆರಳುವುದಿಲ್ಲವೆಂದು ಸಿಬ್ಬಂದಿ, ಕಾರ್ಮಿಕರು ಪಟ್ಟುಹಿಡಿದು, ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು.ಕಾಡಶೆಟ್ಟಿಹಳ್ಳಿ ಸಮೀಪ ವಿದ್ಯುತ್ ಲೈನ್ ತುಂಡಾಗಿದ್ದರಿಂದ ಅದನ್ನು ಸರಿಪಡಿಸಲು ಗುತ್ತಿಗೆದಾರ ಮಾಲತೇಶ ಮಣ್ಣಮ್ಮನವರ ಎಂಬವರಿಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಕಾಮಗಾರಿ ಕೈಗೊಂಡಾಗ ವಿದ್ಯುತ್ ಅವಘಡ ಸಂಭವಿಸಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ಆಫೀಸರ್ ಗಿರೀಶ ಗುಮಗಂಡಿ, ಲೈನ್‌ಮನ್, ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರತಿಭಟಿಸಿದ ಗುತ್ತಿಗೆದಾರರ ಸಂಘ, ಲೈನ್‌ಮನ್‌ಗಳು ತಪ್ಪಿತಸ್ಥ ರೈತರ ಮೇಲೆ ಪ್ರಕರಣ ದಾಖಲಿಸದ ಹೊರತೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಧರಣಿ ನಡೆಸಿದರು.
ಭರವಸೆ ನೀಡಿದ ಅಧಿಕಾರಿಗಳು: ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾನಗಲ್ಲಿನ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ ಹಾವೇರಿ ವೃತ್ತದ ಹೆಸ್ಕಾಂ ಪ್ರಭಾರಿ ಅಧೀಕ್ಷಕ ಅಭಿಯಂತರ ನಾರಾಯಣ ಕಳ್ಳಿಮನಿ, ಕಾರ್ಮಿಕನ ಸಾವಿನ ಹಿಂದಿರುವ ಸಮಸ್ಯೆಯನ್ನು ಕಂಡುಹಿಡಿಯಲಾಗಿದೆ. ಈ ಕುರಿತಂತೆ ವಿಜೆಲೆನ್ಸ್ ವಿಭಾಗದವರಿಗೆ ಮಾಹಿತಿ ನೀಡಿದ್ದೇವೆ. ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ವಸ್ತುಸ್ಥಿತಿಯ ಸಂಪೂರ್ಣ ವರದಿಯನ್ನೂ ಸಲ್ಲಿಸಲಾಗಿದೆ. ತಪ್ಪಿತಸ್ಥ ರೈತರ ಮೇಲೆ ದೂರು ದಾಖಲಿಸಲು ಕಾನೂನು ಪ್ರಕ್ರಿಯೆಗಳು ನಡೆದಿವೆ. ಸೋಮವಾರದ ಹೊತ್ತಿಗೆ ದೂರು ದಾಖಲಿಸಲಾಗುತ್ತದೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು. ಹಿರಿಯ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸೋಮವಾರದ ವರೆಗೆ ಹಿಂಪಡೆಯಲಾಯಿತು.ವಿದ್ಯುತ್ ಪ್ರಸರಣಾ ನಿಗಮದ ಸಂಘಟನಾ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಅಗಡಿ, ಹಾವೇರಿ ತಾಲೂಕು ಅಧ್ಯಕ್ಷ ಶಂಕರ ಕಾಳಶೆಟ್ಟಿ, ಉಪಾಧ್ಯಕ್ಷ ಜಯಣ್ಣ ಕೋಲಾರ, ನಾಗರಾಜ ತಟ್ಟೆಪ್ಪನವರ, ಹಾನಗಲ್ಲ ಎಇಇ ವಿ.ಎಸ್. ಮರಿಗೌಡರ, ಸಾಗರ ಗಣೇಶಗುಡಿ, ಹಾನಗಲ್ಲ ಘಟಕದ ಅಧ್ಯಕ್ಷ ಎ.ಡಿ. ಸೋಮಾಪುರ, ಚಾಮರಾಜ ಕುಲುಮಿ, ಮಲ್ಲೇಶ ಪೂಜಾರ, ನಾಗರಾಜ ವಡ್ಡರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ವಿ. ಮಲ್ಲಿಗ್ಗಾರ, ಮಾಲತೇಶ ಮಣ್ಣಮ್ಮನವರ, ಬಸವರಾಜ ದ್ಯಾವಣ್ಣನವರ, ವೀರೇಶ ಹಿರೇಮಠ, ಇಬ್ರಾಹಿಂ ಜಡೆ, ಎಂ.ಎಂ. ಮುಲ್ಲಾ, ಪ್ರಭು ಪಾಟೀಲ, ಮಂಜು ಸಾಲಿ, ನಿಂಗಪ್ಪ ಸುಣಗಾರ ಇತರರು ಪಾಲ್ಗೊಂಡಿದ್ದರು.