ನೀರು ಕುಡಿಯಲು ತೋಟದ ಲೈನ್‌ ನ ಕೊಠಡಿಯತ್ತ ಹೋಗುವಾಗ ದಿಢೀರ್ ದಾಳಿ

ಕನ್ನಡಪ್ರಭ ವಾರ್ತೆ ಕಳಸ

ತಾಲೂಕಿನ ಮರಸಣಿಗೆ ಸಮೀಪದ ಎಸ್ಟೇಟ್‌ವೊಂದರಲ್ಲಿ ಶನಿವಾರ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಕಾಫಿ ತೋಟದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಚೇತನ್ (30) ಕಾಡುಕೋಣ ದಾಳಿಗೆ ಬಲಿಯಾದ ದುರ್ಧೈವಿ. ಹೊರನಾಡು ಗ್ರಾಮದ ಕವನಳ್ಳದ ಮರಸಣಿಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ನೀರು ಕುಡಿಯಲು ತೋಟದ ಲೈನ್ ಮನೆಯಲ್ಲಿರುವ ಅವರದೇ ಕೊಠಡಿಯತ್ತ ಹೋಗುತ್ತಿದ್ದಾಗ ದಿಢೀರ್ ಎದುರಾದ ಕಾಡುಕೋಣ ಚೇತನ್ ಎದೆ ಮತ್ತು ಹೊಟ್ಟೆ ಭಾಗಕ್ಕೆ ಬಲವಾಗಿ ತಿವಿದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನ್ನು ತಕ್ಷಣ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ.

ಚೇತನ್ ಅವರಿಗೆ ಒಂದೂವರೆ ವರ್ಷದ ಮಗುವಿದೆ. ಪತ್ನಿ ಗರ್ಭಿಣಿಯಾಗಿದ್ದು, ಆತನ ಸಾವಿನಿಂದ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.


ವಿಷಯ ತಿಳಿಯುತ್ತಿದ್ದಂತೆ ಡಿಎಫ್‌ಒ ರವಿಶಂಕರ್, ಎಸ್ಪಿ ಜಿತೇಂದ್ರಕುಮಾರ್ ದಯಾಮ, ಡಿವೈಎಸ್‌ಪಿ ಬಾಲಾಜಿ ಹಾಗೂ ಸಿಸಿಎಫ್ ಯಶಪಾಲ್ ಕ್ಷೀರಸಾಗರ್ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆಯಿಂದ ಮೃತರ ಕುಟುಂಬಕ್ಕೆ ₹20 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಲಾಯಿತು. ಮುಂದಿನ 5 ವರ್ಷಗಳ ಕಾಲ ಮೃತರ ಪತ್ನಿಯ ಹೆಸರಿಗೆ ಮಾಸಿಕ 4 ಸಾವಿರ ನೀಡುವುದಾಗಿ ಡಿಎಫ್‌ಒ ಭರವಸೆ ನೀಡಿದರು.

ತೋಟದ ಮಾಲೀಕರು ₹2 ಲಕ್ಷ ನೆರವು ನೀಡಿ ಮಾನವೀಯತೆ ಮೆರೆದರು. ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಜೈನ್, ಮುಖಂಡರಾದ ವಿಶ್ವನಾಥ್, ಶಾಸಕರ ಆಪ್ತ ಸಹಾಯಕ ಸಂಶುದ್ದೀನ್ ಸ್ಥಳದಲ್ಲಿದ್ದರು. ಭದ್ರತೆ ದೃಷ್ಟಿಯಿಂದ ಕಳಸ ಆಸ್ಪತ್ರೆ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

---ಬಾಕ್ಸ್‌----

ಹಣ ಶಾಶ್ವತ ಪರಿಹಾರವಲ್ಲ

ತಾಲೂಕಿನಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಲಾಖೆ ಕೇವಲ ಪರಿಹಾರ ಹಣ ನೀಡಿ ಕೈತೊಳೆದುಕೊಳ್ಳುತ್ತಿದೆ. ಆದರೆ ನಮ್ಮ ಪ್ರಾಣ ರಕ್ಷಣೆಗೆ ಶಾಶ್ವತ ಪರಿಹಾರವೇನು? ಎಂಬುದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅನಾಹುತ ನಡೆದಾಗ ಹೋರಾಟಕ್ಕೆ ಬರುತ್ತಿದ್ದ ರಾಜಕೀಯ ಮುಖಂಡರು, ಈಗ ಒಬ್ಬ ಕಾರ್ಮಿಕನ ಜೀವ ಹೋದಾಗ ಬರದಿರುವುದು ಮೃತರ ಬಂಧುಗಳ ಅಸಮಾಧಾನಕ್ಕೆ ಕಾರಣವಾಯಿತು.

ಕೇವಲ ಹಣ ನೀಡುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಮನೆಗೆ ಆಧಾರವಾಗಿದ್ದ ಚೇತನ್‌ನನ್ನು ಕಳೆದುಕೊಂಡ ಕುಟುಂಬ ಈಗ ಬೀದಿಗೆ ಬಿದ್ದಿದೆ. ಕಾಡುಪ್ರಾಣಿಗಳ ಹಾವಳಿಗೆ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.