ಸಾರಾಂಶ
ದಾಬಸ್‍ಪೇಟೆ: ಕಂಪನಿಯಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಸೋಂಪುರ ಹೋಬಳಿಯ ಬಿಲ್ಲಿನಕೋಟೆ ಗ್ರಾಮದಲ್ಲಿರುವ ಎಸ್ಕಾನ್ ಜೆನ್ಸೆಟ್ ಪ್ರೈವೇಟ್ ಕಂಪನಿಯಲ್ಲಿ ನಡೆದಿದೆ. ನರಸೀಪುರ ಗ್ರಾಮದ ಎನ್.ಸಿ.ಗಿರಿಗೌಡ (29) ಮೃತಪಟ್ಟ ಕಾರ್ಮಿಕನಾಗಿದ್ದು, ಸೆ.8ರಂದು ರಾತ್ರಿ ಕೆಲಸದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಪರಿಣಾಮ ದಾಬಸ್‍ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ. ಮದುವೆ ನಿಶ್ಚಿತ: ನವೆಂಬರ್ ತಿಂಗಳಿನಲ್ಲಿ ಮೃತ ಗಿರಿಗೌಡಗೆ ಮದುವೆ ಮಾಡಲು ಪೋಷಕರು ನಿಶ್ಚಯಸಿದ್ದರು. ಆದರೆ ಮದುವೆಗೆ ಮುನ್ನವೇ ಗಿರಿಗೌಡ ಬಾರದ ಲೋಕಕ್ಕೆ ಪಯಣಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ: ಕರ್ತವ್ಯದ ವೇಳೆ ಕಾರ್ಮಿಕ ಮೃತಪಟ್ಟ ಹಿನ್ನೆಲೆ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ನೂರಾರು ಸಾರ್ವಜನಿಕರು ಆಸ್ಪತ್ರೆ ಮುಂದೆ ಜಮಾಯಿಸಿ, ಕಂಪನಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.15 ಲಕ್ಷ ರು. ಪರಿಹಾರ ಭರವಸೆ: ಬಳಿಕ ಆಸ್ಪತ್ರೆಯ ಬಳಿ ಆಗಮಿಸಿದ ಕಂಪನಿಯ ಆಡಳಿತ ಮಂಡಳಿಯವರು 15 ಲಕ್ಷ ರು. ಪರಿಹಾರ ನೀಡುವುದಾಗಿ ಮೃತನ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ದಾಬಸ್‍ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮೃತನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಘಟನೆ ಸಂಬಂಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.