ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಖಾಸಗಿ ಕಾರ್ಖಾನೆ ನೌಕರ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಪೀಣ್ಯ ಸಮೀಪದ ಎನ್‌ಟಿಟಿಎಫ್‌ ಜಂಕ್ಷನ್‌ ಬಳಿ ಶನಿವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕಬ್ಬಿಣ ಕಾರ್ಖಾನೆಯ ನೌಕರ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಖಾಸಗಿ ಕಾರ್ಖಾನೆ ನೌಕರ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಪೀಣ್ಯ ಸಮೀಪದ ಎನ್‌ಟಿಟಿಎಫ್‌ ಜಂಕ್ಷನ್‌ ಬಳಿ ಶನಿವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕಬ್ಬಿಣ ಕಾರ್ಖಾನೆಯ ನೌಕರ ಮೃತಪಟ್ಟಿದ್ದಾನೆ.

ಲಿಂಗಸೂರು ನಿವಾಸಿ ಸಂದೀಪ್‌(20) ಮೃತ ನೌಕರ. ರಾಜಗೋಪಾಲನಗರದಲ್ಲಿ ವಾಸವಾಗಿದ್ದ ಸಂದೀಪ್‌, ಪೀಣ್ಯದಲ್ಲಿರುವ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಸಂದೀಪ್‌ ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಬೈಕ್‌ನಲ್ಲಿ ತನ್ನ ಸ್ನೇಹಿತನನ್ನು ಹಿಂಬದಿ ಕೂರಿಸಿಕೊಂಡು ದಾಸರಹಳ್ಳಿ ಕಡೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಎನ್‌ಟಿಟಿಎಫ್‌ ಜಂಕ್ಷನ್‌ ರಸ್ತೆ ಬಳಿಯ ರಸ್ತೆ ‍ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಇಬ್ಬರು ಬಿದ್ದು ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಂದೀಪ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೀಣ್ಯ ಸಂಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ: ವೃದ್ಧ ಸಾವು

ಮತ್ತೊಂದು ಪ್ರಕರಣದಲ್ಲಿ ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವೃದ್ಧ ಮೃತಪಟ್ಟ ಘಟನೆ ಚಿಕ್ಕಬಾಣವಾರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ಬಿಗೆರೆ ನಿವಾಸಿ ಕನ್ಯಪ್ರಕಾಶ್‌ (65) ಮೃತ ವೃದ್ಧ. ಚಿಕ್ಕಬಾಣಾವರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಪ್ರಕಾಶ್‌, ಸಂಜೆ 6 ಗಂಟೆ ಸುಮಾರಿಗೆ ಕಾಮಾಕ್ಷಿ ಫಂಕ್ಷನ್‌ ಹಾಲ್‌ ಬಳಿಯ ಪಾದಚಾರಿ ರಸ್ತೆಯಲ್ಲಿ ಬಂದು ರಸ್ತೆ ದಾಟುತ್ತಿದ್ದರು. ಆ ವೇಳೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಬಾಣವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.