ಶ್ರಮಶಕ್ತಿ ನೀತಿ -2025 ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಕಾರ್ಮಿಕರು ನಗರದ ಟೌನ್‌ಹಾಲ್ ನಿಂದ ಮೆರವಣಿಗೆಯಲ್ಲಿ ತೆರಳಿ ಬಿ.ಎಸ್. ಎನ್. ಎಲ್ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ ವೇಳೆ ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು ಶ್ರಮಶಕ್ತಿ ನೀತಿ -2025 ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಕಾರ್ಮಿಕರು ನಗರದ ಟೌನ್‌ಹಾಲ್ ನಿಂದ ಮೆರವಣಿಗೆಯಲ್ಲಿ ತೆರಳಿ ಬಿ.ಎಸ್. ಎನ್. ಎಲ್ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ ವೇಳೆ ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದರು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಹೋರಾಟಗಳಿಂದ ಗಳಿಸಿದ ಹಕ್ಕುಗಳನ್ನು ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸದೆ, ಏಕ ಪಕ್ಷೀಯವಾಗಿ ಕಾಪೋರೇಟ್ ಧಣಿಗಳ ಪರ ಬದಲಿಸಿರುವುದು ಖಂಡನಾರ್ಹ ಎಂದರು.
ಜಿಲ್ಲಾ ಖಜಾಂಚಿ ಎ. ಲೋಕೇಶ್ ಮಾತನಾಡಿ 21 ನವೆಂಬರ್ 2025 ರಂದು ಜಾರಿಮಾಡಲಾದ ನಾಲ್ಕು ಕಾರ್ಮಿಕ ಸಂಹಿತೆಗಳ ಈ ನಿರಂಕುಶ ಮತ್ತು ಅಪ್ರಜಾಸತ್ತಾತ್ಮಕ ಕ್ರಮವಾಗಿದೆ. ಈ ನಡೆಯು ನಮ್ಮ ದೇಶ ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ಧ್ವಂಸಗೊಳಿಸುತ್ತದೆ ಎಂದರು. ಸುಜೀತ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಈ ಕೂಡಲೆ ಮಾಸಿಕ 36 ಸಾವಿರ ಕನಿಷ್ಟ ವೇತನವನ್ನು ಜಾರಿಗೊಳಿಸಬೇಕು. ಗುತ್ತಿಗೆ ಕಾರ್ಮಿಕರ ಖಾಯಂಮಾತಿಗಾಗಿ ಶಾಸನ ಒಂದನ್ನು ರೂಪಿಸಬೇಕು. ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡುವ ಬದಲು ಸಹಕಾರ ಸಂಘ ರಚಿಸುವ ನಡೆ ಒಪ್ಪಲಾಗದು ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಶಿವಕುಮಾರ್ ಸ್ವಾಮಿ, ಉಮೇಶ್, ಮಾರುತಿ. ಮಂಜುನಾಥ, ಲಿಂಗೇಶ್, ಮುತ್ತುರಾಜು, ಮಂಜುನಾಥ, ಸುಬ್ರಮಣ್ಯ, ಕಲ್ಪನಾ ಇತರರಿದ್ದರು.