ಬರಗಾಲದ ಸಂಕಷ್ಟದ ನಡುವೆ ಗ್ರಾಮೀಣ ಕಾರ್ಮಿಕರು ಬದುಕಿಗಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿ-ರಾಮ್-ಜಿ ಯೋಜನೆಯಲ್ಲಿನ ಪಾವತಿ ಅಡೆತಡೆ ನಿವಾರಿಸಿ, ಉದ್ಯೋಗ ಖಾತ್ರಿ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಕಾರ್ಮಿಕರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ: ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಪಾವತಿಯಾಗುತ್ತಿಲ್ಲ. ಇತ್ತ ಹೊಸ ಕೆಲಸವೂ ಸಿಗುತ್ತಿಲ್ಲ. ಪರಿಣಾಮ ಬರಗಾಲದ ಸಂಕಷ್ಟದ ನಡುವೆ ಗ್ರಾಮೀಣ ಕಾರ್ಮಿಕರು ಬದುಕಿಗಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿ-ರಾಮ್-ಜಿ ಯೋಜನೆಯಲ್ಲಿನ ಪಾವತಿ ಅಡೆತಡೆ ನಿವಾರಿಸಿ, ಉದ್ಯೋಗ ಖಾತ್ರಿ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಕಾರ್ಮಿಕರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿ-ರಾಮ್-ಜಿ ಯೋಜನೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು. ಯೋಜನೆಯಡಿ ಕಾರ್ಮಿಕರಿಗೆ ಎದುರಾಗಿರುವ ಅಡೆತಡೆಗಳನ್ನು ತಕ್ಷಣ ನಿವಾರಿಸಬೇಕು. ಕೆ-2 ಮತ್ತು ಖಜಾನೆ ಮೂಲಕ ಕೂಲಿ ಪಾವತಿಸುವ ಪ್ರಸ್ತುತ ವ್ಯವಸ್ಥೆ ಬದಲಿಸಿ, ಈ ಹಿಂದೆ ಇದ್ದಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಕಾರ್ಮಿಕರ ಖಾತೆಗಳಿಗೆ ಸಕಾಲಕ್ಕೆ ಹಣ ಜಮೆ ಮಾಡಬೇಕು. ಜಾತಿ ಆಧಾರಿತ ಕೂಲಿ ಪಾವತಿ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೆಲಸ ಮಾಡಿದರೂ ಕೂಲಿ ಸಿಗದಿರುವುದು ಕಾರ್ಮಿಕರ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಎಂಬ ಕಾರಣ ನೀಡಿ ಕೆಲಸ ನಿರಾಕರಿಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಉದ್ಯೋಗ ಖಾತ್ರಿ ಕೆಲಸಗಳನ್ನು ತಕ್ಷಣ ಆರಂಭಿಸಬೇಕು. ಸಾಮಾಜಿಕ ಭದ್ರತಾ ಸೌಲಭ್ಯದಡಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಗುತ್ತೆಮ್ಮ ಸುಣಗಾರ ಆಗ್ರಹಿಸಿದರು.

ಜಿಲ್ಲಾ ಕಾರ್ಮಿಕ ಮುಖಂಡ ದಾದಾಪೀರ್ ತಿಳವಳ್ಳಿ, ಕಾರ್ಮಿಕರಿಗೆ ನಿರಂತರ ಉದ್ಯೋಗ ದೊರೆಯುವಂತೆ ಗ್ರಾಮ ಮಟ್ಟದಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ, ಅರಣ್ಯ ಪ್ರದೇಶಗಳ ಪರಿಸರ ಅಭಿವೃದ್ಧಿ ಹಾಗೂ ರೈತರ ಜಮೀನುಗಳಲ್ಲಿ ಜಲಾನಯನ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ್ ಅವರು, ಕಾರ್ಮಿಕರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಮನವಿ ಪತ್ರವನ್ನು ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಾರ್ಮಿಕ ಸಂಘದ ಮುಖಂಡರಾದ ಸಚಿನ್ ಬೂದಿಹಾಳ, ನಾಗಮ್ಮ ಮಲ್ಲಳ್ಳಿ, ಮಾಲತೇಶ ಕಮಾಟಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಚನ್ನಬಸಪ್ಪ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.