ಸಾರಾಂಶ
ವಿಶ್ವ ಕಾರ್ಮಿಕರ ದಿನಾಚರಣೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಪ್ರತಿಯೊಂದು ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡುತ್ತಿರುವ ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಜನಾರ್ದನ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಎಐಟಿಯುಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು 2ನೇ ತಾಲೂಕು ಕಾರ್ಮಿಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನೀವು ಆಯ್ಕೆ ಮಾಡುವ ಜನಪ್ರತಿನಿಧಿ ನಿಮ್ಮ ಪರ ಕೆಲಸ ಮಾಡುವ ವ್ಯಕ್ತಿಯ ಆಯ್ಕೆ ಮಾಡಲು ನಿಮಗೆ ಮೊದಲು ರಾಜಕೀಯ ಪ್ರಜ್ಞೆ ಬೇಕಿದೆ. ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಕಾರ್ಮಿಕರು ಸೆಸ್ ರೂಪದಲ್ಲಿರುವ ಕೋಟ್ಯಂತರ ಕೊಳೆಯುತ್ತಿದೆ. ಇದೇನು ಸರ್ಕಾರದ ಹಣವಲ್ಲ, ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಬಿಡುಗಡೆ ಮಾಡಲು ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಕಾರ್ಮಿಕ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಭಾರತ ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಇದರ ಅಡಿಯಲ್ಲಿ ಹತ್ತು ಹಲವು ಸಂಘಟನೆ ಸೇರಿಕೊಂಡು ಬೆವರಿನ ಹನಿ ಸುರಿಸುತ್ತಿರುವ ದುಡಿಯುವ ವರ್ಗದ ಪರ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮ ಆಳುವ ಸರ್ಕಾರಗಳು ಅವೈಜ್ಞಾನಿಕ ಕಾನೂನು ಜಾರಿಗೊಳಿಸಿದ ಫಲವಾಗಿ,ನಮ್ಮ ದುಡಿಮೆಯ ಪ್ರತಿಫಲ ಬಂಡವಾಳ ಶಾಹಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಪಡೆಯುತ್ತಿದ್ದಾರೆ. ಆದರಿಂದ ಕಾರ್ಮಿಕರು ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಸಂಘಟನೆಗಳು ಸುಮ್ಮನೇ ಕುಳಿತರೇ ಸುಲುಗೆ ತಪ್ಪದು, ಸಂಘಟಿತರಾಗಿ ಹೋರಾಟ ಮಾಡಿದರೇ ಜಯ ನಮ್ಮದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಅನ್ಯೂನತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ.ಆದರೆ ಇದನ್ನು ಸಹಿಸದ ಕೆಲವರು ನಮ್ಮ ಮನಸ್ಸುಗಳನ್ನು ಒಡೆದು ದಾರಿ ತಪ್ಪಿಸುವಂತಹ ಕೆಲಸ ಮಾಡಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ದೇಶದ ಸಂವಿಧಾನಕ್ಕೆ ಕುತ್ತು ತಂದಿದ್ದಾರೆ. ಸಂವಿಧಾನ ಉಳಿಸಿದರೇ, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲರ ಹಕ್ಕುಗಳು ಉಳಿಸಲು ಸಾಧ್ಯವಿದೆ, ಆದರಿಂದ ನಾವೇಲ್ಲ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದರು.ತಾಪಂ ಇಒ ಎಂ. ಉಮೇಶ ಮಾತನಾಡಿ, ಎಐಟಿಯುಸಿ ಸಂಘಟನೆ ಎಲ್ಲ ವರ್ಗದ ಜನರ ಜೊತೆಗೂಡಿ ಸಮಾನತೆ ಸಾರುವ ಸಂಘಟನೆಯಾಗಿದೆ. ಕಾರ್ಮಿಕ ವರ್ಗದ ಹಿತ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕತೆಯರು, ಬಿಸಿಯೂಟ ತಯಾರಿಕರು ಹೀಗೆ ಹಲವಾರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೇಡಿಕೆಗಾಗಿ ಹೋರಾಟ ಮಾಡಿ, ಸಣ್ಣ ಪ್ರಮಾಣದಲ್ಲಾದರೂ ಪ್ರತಿಫಲ ಕಂಡಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ ಮಾತನಾಡಿ, ವಿದ್ಯಾರ್ಥಿ ಯುವ ಜನಾಂಗದಲ್ಲಿ ಹೋರಾಟದ ಹಾದಿ ತೋರಿದ ಈ ಸಂಘಟನೆಗೆ ಬಹು ದೊಡ್ಡ ಇತಿಹಾಸವಿದೆ ಎಂದರು.ಸಂಘಟನೆಯ ಗುಡಿಹಳ್ಳಿ ಹಾಲೇಶ, ಇಪ್ಟಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ. ಚಮನ್‌ಸಾಬ್, ಎಐವೈಎಫ್ ಸಂಘಟನೆ ಸಂಚಾಲಕ ಬಸವರಾಜ ಸಂಶಿ, ಎಐಟಿಯುಸಿ ರಾಜ್ಯ ಸಂಘಟನೆ ಸದಸ್ಯ ಸುರೇಶ ಹಲಗಿ, ಪತ್ರಕರ್ತ ಖಾಜಾ ಹುಸೇನ್ ಸೇರಿದಂತೆ ಇತರರು ಮಾತನಾಡಿದರು.
ಸಿಡಿಪಿಒ ರಾಮನಗೌಡ, ಕಾರ್ಮಿಕ ಇಲಾಖೆ ಅಧಿಕಾರಿ ಮೌನೇಶ ನಾಯ್ಕ, ಬಿಸಿಯೂಟ ತಯಾರಿಕರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಚ್. ಅನುಸೂಯಮ್ಮ, ಅಂಗನವಾಡಿ ಫೆಡರೇಷನ್ ತಾಲೂಕಾಧ್ಯಕ್ಷೆ ಜಯಲಕ್ಷ್ಮೀ, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಬಾವಾಜಿ ಜಂಗ್ಲಿಸಾಬ್, ಪಿ.ಕವಿತಾ, ಎಐಕೆಎಸ್ ತಾಲೂಕಾಧ್ಯಕ್ಷ ಡಿ. ಮುಕುಂದಗೌಡ, ದೇವದಾಸಿ ಸಂಘಟನೆ ತಾಲೂಕಾಧ್ಯಕ್ಷೆ ಎಚ್. ದಂಡೆಮ್ಮ, ಕೆ.ಟಿ. ಪೀರಾವಲಿ, ವಿ.ಜಯನಾಯ್ಕ,ತೋಟಯ್ಯ ಸೇರಿದಂತೆ ಇತರರಿದ್ದರು.