ಕಾರ್ಮಿಕರು ಕೇವಲ ಕೆಲಸಗಾರರಲ್ಲ. ಅವರೆಲ್ಲ ದೇಶದ ಅಭಿವೃದ್ಧಿಯ ಮೂಲಶಕ್ತಿ
ಕಾರಟಗಿ: ದೇಶದಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯ ವಲಯ ಅಭಿವೃದ್ಧಿ ಸೇರಿದಂತೆ ನಗರ ಮತ್ತು ಪ್ರದೇಶಗಳ ಸ್ವಾಸ್ಥ್ಯ ಕಾಪಾಡುವ ಕಾರ್ಮಿಕರ ಪಾಲು ಬಹುದೊಡ್ಡದು ಎಂದು ಕರ್ನಾಟಕ ರೈತ ಜನ ಸಂಘದ ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ್ ಹೇಳಿದರು.
ತಾಲೂಕಿನ ಬೂದುಗುಂಪಾ ಗ್ರಾಪಂನಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ಕಾರ್ಮಿಕರಿಗೆ ಸಂಘದಿಂದ ಸನ್ಮಾನಿಸಿ ಮಾತನಾಡಿದರು.ಕಾರ್ಮಿಕರು ಕೇವಲ ಕೆಲಸಗಾರರಲ್ಲ. ಅವರೆಲ್ಲ ದೇಶದ ಅಭಿವೃದ್ಧಿಯ ಮೂಲಶಕ್ತಿ. ದುಡಿಮೆಯನ್ನೇ ದೇವರೆಂದು ಭಾವಿಸಿ ಶ್ರಮಿಸುವವರು ನಿಜವಾದ ಆಸ್ತಿ. ದೇಶದಲ್ಲಿ ೧೯೨೩ ನೇ ಇಸ್ವಿಯಲ್ಲಿ ಅಂದಿನ ಮದ್ರಾಸ್ ಇಂದಿನ ಚೆನ್ನೈಯಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಲಾಕ್ ಡೌನ್ ಇದ್ದಾಗ ಯಾರು ಹೊರಗಡೆ ಬರದೇ ಎಲ್ಲರೂ ಊಟ ಮಾಡಿ ಮಲಗಿದರೆ ಕಾರ್ಮಿಕರು ಜೀವದ ಭಯ ತೊರೆದು ಕೆಲಸ ಮಾಡಿದರು.
ಪಿಡಿಒ ಡಾ. ವೆಂಕಟೇಶ್ ನಾಯಕ್ ಮಾತನಾಡಿ, ಕಾರ್ಮಿಕರ ಬಗ್ಗೆ ಒಲವು ತೋರಿದರು ಎನ್ನುವ ಕಾರಣ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನವಾದ ಮೇ ೧ನೇ ತಾರೀಕಿನಂದು ಕಾರ್ಮಿಕರ ದಿನಾಚರಣೆ ಆಚರಿಸುತ್ತಾರೆ. ಪ್ರತಿಯೊಂದು ರಂಗದಲ್ಲಿ ದುಡಿಯುವಂತ ಕಾರ್ಮಿಕರು ಕಷ್ಟ ಜೀವಿ. ಪಂಚಾಯತಿ ಕಾರ್ಮಿಕರಿಗೆ ರೈತ ಸಂಘ ಧೈರ್ಯ ಕೊಡುವುದರ ಜತೆಗೆ ಉತ್ಸಾಹ ಮೂಡಿಸಿದ್ದಾರೆ ಎಂದು ಹೇಳಿದರು.ಇದೇ ವೇಳೆ ಕಾರ್ಮಿಕ ನಿರುಪಾದಿ ಭರಮಪ್ಪ, ನಾಗೇಂದ್ರಪ್ಪ ದುರ್ಗಪ್ಪ, ಶರಣಮ್ಮ ವೀರೇಶ ಇವರಿಗೆ ಕರ್ನಾಟಕ ರೈತ ಜನ ಸಂಘದಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರವಸೂಲಿಗಾರ ರಾಮಣ್ಣ ಭಜಂತ್ರಿ, ಬಸನಗೌಡ, ಬಸವರಾಜ, ಪೂಜಾ ಶಿವಕುಮಾರ್, ಮದರ್ ಬಿ, ಸಲೀಂಸಾಬ್, ಮೈಬು ಪಾಷಾ ಮುಖಂಡರು, ಗ್ರಾಪಂ ಮಾಜಿ ಸದಸ್ಯ ಷಣ್ಮುಖಪ್ಪ ನಾಲ್ಕೆತ್ತಿನ್, ರಾಮಣ್ಣ, ವೀರಭದ್ರಪ್ಪ ಕುಂತನೂರ್, ಬಸವರಾಜ ಜುಟ್ಟಾಲ್, ಪಂಪಾಪತಿ ಗುಡಿದಿನಿ ಉಪಸ್ಥಿತರಿದ್ದರು.