ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

| Published : Sep 23 2025, 01:05 AM IST

ಸಾರಾಂಶ

ಸ್ಥಳೀಯ ಕಾರ್ಮಿಕರ ಸಮಸ್ಯೆಗಳಿಗೆ ಹೊಸ ದೃಷ್ಟಿಕೋನದಿಂದ ಪರಿಹಾರ ಸಿಗುವ ಸಾಧ್ಯತೆ ಇದೆ.

ಕಂಪ್ಲಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿ, ನಂತರ ಕಾರ್ಮಿಕ ನಿರೀಕ್ಷಕ ಕಚೇರಿಯ ಡಿಇಒ ಕೆ.ವಿಘ್ನೇಶ್ ಗೆ ಮನವಿ ಸಲ್ಲಿಸಿದರು.

ಫೆಡರೇಷನ್ ತಾಲೂಕು ಅಧ್ಯಕ್ಷ ಐ.ಹೊನ್ನೂರುಸಾಬ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಸ್ತುತ ಡಿಇಒಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಇದರಿಂದ ಸ್ಥಳೀಯ ಕಾರ್ಮಿಕರ ಸಮಸ್ಯೆಗಳಿಗೆ ಹೊಸ ದೃಷ್ಟಿಕೋನದಿಂದ ಪರಿಹಾರ ಸಿಗುವ ಸಾಧ್ಯತೆ ಇದೆ. ಕಾರ್ಮಿಕರ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ಮರಳು ದೊರಕಿಸಲು ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು. 2021ರಲ್ಲಿ ಹೊರಡಿಸಿದ ಹೊಸ ನೋಟಿಫಿಕೇಷನ್ ಪ್ರಕಾರವೇ 2025ನೇ ಸಾಲಿನ ಜೊತೆಗೆ ಹಿಂದಿನ ಸಾಲುಗಳ ಶೈಕ್ಷಣಿಕ ಸಹಾಯಧನ ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕಾರ್ಮಿಕರ ಜೀವದ ಸುರಕ್ಷತೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದು ಅತ್ಯಗತ್ಯ. ನಕಲಿ ಕಾರ್ಮಿಕರ ತಪಾಸಣೆಗೆ ತಡೆ ಒಡ್ಡಿ, ನಿಜವಾದ ಕಾರ್ಮಿಕರಿಗೆ ಮಾತ್ರ ಸೌಲಭ್ಯ ನೀಡುವ ಕ್ರಮ ಕೈಗೊಳ್ಳಬೇಕು. ಮನೆ ನಿರ್ಮಾಣಕ್ಕಾಗಿ ಕಾರ್ಮಿಕರಿಗೆ ₹5 ಲಕ್ಷ ಸಹಾಯಧನ ನೀಡುವಂತೆ ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯ ಮಟ್ಟದ ಸಿಡಬ್ಲ್ಯುಎಫ್‌ಐ ಸಂಘಟನೆಯೊಂದಿಗೆ ಸೇರಿ ಬೆಂಗಳೂರಿನಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಆರ್.ನಾಗರಾಜ, ಖಜಾಂಚಿ ಗಂಗಣ್ಣ, ಪದಾಧಿಕಾರಿಗಳಾದ ಬಿ.ಶಾಂತಪ್ಪ, ಎನ್.ಕರಿಬಸವ, ಕೆ.ಭೀಮಪ್ಪ ರಾಮಸಾಗರ, ಕಾನೇರು ಮೈಲಪ್ಪ ದೇವಲಾಪುರ, ಪರಶುರಾಮ, ವೆಂಕಟೇಶ, ಗಂಗಯ್ಯ ಉಪಸ್ಥಿತರಿದ್ದರು.