ಸಾರಾಂಶ
ಸಿಐಟಿಯು ಮತ್ತು ಜಿಲ್ಲಾ ಕೇಂದ್ರದ ಕಾರ್ಮಿಕ ಸಂಘಟನೆಗಳ ವತಿಯಿಂದ ಜು.9ರಂದು ರಾಜ್ಯಮಟ್ಟದ ಮುಷ್ಕರ
ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯದ ವಿವಿಧ ಸರ್ಕಾರಿ, ಖಾಸಗಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ ಖಂಡಿಸಿ ಸಿಐಟಿಯು ಮತ್ತು ಜಿಲ್ಲಾ ಕೇಂದ್ರದ ಕಾರ್ಮಿಕ ಸಂಘಟನೆಗಳ ವತಿಯಿಂದ ಜು.9ರಂದು ರಾಜ್ಯಮಟ್ಟದ ಮುಷ್ಕರ ಹಮ್ಮಿಕೊಂಡಿದ್ದು ಅದರಂತೆ ತಿಪಟೂರಿನಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್ ಚನ್ನಬಸವಣ್ಣ ತಿಳಿಸಿದರು.ನಗರದ ಕೆ.ಆರ್. ಬಡಾವಣೆಯಲ್ಲಿರುವ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ವೇತನ ಭದ್ರತೆ ಕೊರತೆ, ಸುರಕ್ಷತಾ ಮೂಲಭೂತ ಸೌಲಭ್ಯಗಳ ಕೊರತೆ, ನೌಕರಿ ಕಳೆದುಕೊಳ್ಳುವ ಭೀತಿ ಮತ್ತು ಸಾಮಾಜಿಕ ಸುರಕ್ಷತೆಯ ಕೊರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಯಲಿದೆ. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಜು.9ರಂದು ಬೆಳಗ್ಗೆ 10 ಗಂಟೆಗೆ ತಿಪಟೂರು ಕೆಂಪಮ್ಮದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಟು ನಗರಸಭೆ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಭೆಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ದೇವರಾಜ್ ತಿಮ್ಲಾಪುರ, ಸಿದ್ದಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜಮ್ಮ, ಎಪಿಎಂಸಿ ಅಮಾಲರ ಸಂಘದ ಜಯರಾಮ್, ಗಂಗಾಧರ್, ಸೌಹಾರ್ದ ತಿಪಟೂರು ಅಲ್ಲಾಭಕಾಶ್ ಮತ್ತಿತರರಿದ್ದರು.