ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲಿ

| Published : Oct 15 2025, 02:08 AM IST

ಸಾರಾಂಶ

ದೇಶದಲ್ಲಿ ಹಿಂದೆ ಖಾಸಗಿ ಕಂಪನಿಗಳು ಕಾರ್ಮಿಕರನ್ನು ಗುಲಾಮರಂತೆ ಕಾಣುತ್ತಿದ್ದವು. ಕಾರ್ಮಿಕರಿಂದ ದುಡಿಸಿಕೊಂಡು ಸಮರ್ಪಕ ಪ್ರತಿಫಲ ನೀಡುತ್ತಿರಲಿಲ್ಲ.

ಯಲಬುರ್ಗಾ: ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಸ್ತ್ರೀಶಕ್ತಿ ಭವನದಲ್ಲಿ ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ, ಕರ್ನಾಟಕ ಸಮತಾವಾದ ಭೀಮ್ ಸೇನೆ, ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಸಹಯೋಗದಲ್ಲಿ ಭಾನುವಾರ ಸಮೃದ್ಧಿ ಕಟ್ಟಡ ಕಾರ್ಮಿಕರ ಮಹಿಳಾ ಹಾಗೂ ಪುರುಷ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.

ಸಮೃದ್ಧಿ ಕಟ್ಟಡ ಕಾರ್ಮಿಕರ ಸಂಘ ವೆಲ್ಡಿಂಗ್, ಮರಗೆಲಸ, ದ್ವಿಚಕ್ರ ವಾಹನಗಳ ಮೆಕ್ಯಾನಿಕ್, ರೇಷ್ಮೆ ನೂಲು ಬಿಚ್ಚಣಿಕೆ, ಹಮಾಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೃಷಿ, ತೋಟಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರು ಹೀಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಶ್ರಮ ಜೀವಿಗಳಾಗಿದ್ದು, ಸದಾ ದುಡಿಮೆಯಲ್ಲಿ ತೊಡಗಿರುತ್ತಾರೆ. ಇಂತಹ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆ ಜಾರಿಗೊಳಿಸಿ, ಕಾರ್ಮಿಕ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿವೆ ಎಂದರು.

ದೇಶದಲ್ಲಿ ಹಿಂದೆ ಖಾಸಗಿ ಕಂಪನಿಗಳು ಕಾರ್ಮಿಕರನ್ನು ಗುಲಾಮರಂತೆ ಕಾಣುತ್ತಿದ್ದವು. ಕಾರ್ಮಿಕರಿಂದ ದುಡಿಸಿಕೊಂಡು ಸಮರ್ಪಕ ಪ್ರತಿಫಲ ನೀಡುತ್ತಿರಲಿಲ್ಲ. ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಅದಕ್ಕಾಗಿ ಅನೇಕ ಹೋರಾಟಗಳು ನಡೆದವು. ಹೋರಾಟಕ್ಕೆ ಜಯ ದೊರೆತ ಕಾರಣ ಪ್ರತಿ ವರ್ಷ ಮೇ ೧ರಂದು ಕಾರ್ಮಿಕ ದಿನ ಆಚರಿಸಲಾಗುತ್ತಿದೆ ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ಕಾರ್ಮಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯ ಪಡೆದುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮುಖ್ಯವಾಗಿ ಕಾರ್ಮಿಕರಿಗೆ ಕಾನೂನಿನ ಅರಿವು ಮೂಡಿಸುವ ಪಪಂ ವತಿಯಿಂದ ಲಭ್ಯ ಇರುವ ಎಲ್ಲ ಸೌಲಭ್ಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ವೇಳೆ ನೂತನ ಪದಾಧಿಕಾರಿಗಳಿಗೆ ಗುರುತಿಸಿ ಚೀಟಿ ವಿತರಿಸಲಾಯಿತು. ಹಿರಿಯ ಕಾರ್ಮಿಕರನ್ನು ಗೌರವಿಸಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.

ರಾಜ್ಯ ಕಾರ್ಮಿಕರ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ರಮೇಶ ಎಂ.ಎಲ್., ಉಪನ್ಯಾಸಕ ಶಂಕರ ಛಲವಾದಿ ಮಾತನಾಡಿದರು. ಪ್ರಮುಖರಾದ ಅಂದಪ್ಪ ಹಾಳಕೇರಿ, ಛತ್ರಪ್ಪ ಚಲವಾದಿ, ಶಶಿಧರ ಹೊಸಮನಿ, ಪ್ರಕಾಶ ಉಗ್ರಾಣಿ, ಮಲ್ಲಪ್ಪ ಸುರಕೊಡ, ಪಪಂ ಸದಸ್ಯ ಕಳಕಪ್ಪ ತಳವಾರ, ರವಿ ಚಲವಾದಿ ಇದ್ದರು.