ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ಪಟ್ಟಣದ ಬಂದರು ರಸ್ತೆಯಲ್ಲಿರುವ ಶ್ರೀದೇವಿ ಸಮೂಹ ಸಂಸ್ಥೆಯ ನರ್ಸಿಂಗ್ ಮತ್ತು ಪಾರಾಮೆಡಿಕಲ್ ವಿಭಾಗದ ತರಗತಿ ಉದ್ಘಾಟನಾ ಸಮಾರಂಭ ಶ್ರೀದೇವಿ ಆಸ್ಪತ್ರೆಯ ಆವಾರದಲ್ಲಿ ನಡೆಯಿತು.ಉದ್ಘಾಟಕರಾಗಿ ಆಗಮಿಸಿದ್ದ ಜಿ.ಯು. ಭಟ್ ಮಾತನಾಡಿ, ಪಾರಾಮೆಡಿಕಲ್ ಅಧ್ಯಯನ ಮಾಡಿದವರಿಗೆ ಜಗತ್ತಿನಾದ್ಯಂತ ಬಹು ಬೇಡಿಕೆಯಿದೆ. ವೈದ್ಯಕೀಯ ಮತ್ತು ಶಿಕ್ಷಣ ಕೇತ್ರದಲ್ಲಿ ಮಾನವೀಯ ಅಂತಃಕರಣ ಕಡಿಮೆಯಾಗುತ್ತಿದೆ. ರೋಗಿಗಳು ಮಾನಸಿಕವಾಗಿ ದೈಹಿಕವಾಗಿ ದಣಿದು ಬಂದಿರುತ್ತಾರೆ. ನೊಂದು ಬಂದವರಿಗೆ ನಗುವನ್ನು ನೀಡಿ ಕಳಿಸುವಂತಾಗಲಿ ಈ ಜನೋಪಯೋಗಿ ಕೆಲಸಕ್ಕೆ ಒಳಿತಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ಎಸ್.ಜೆ. ಕೈರನ್ ಮಾತನಾಡಿ, ಮನುಷ್ಯನಿಗೆ ಉತ್ತಮ ಅರೋಗ್ಯ ಮತ್ತು ಶಿಕ್ಷಣ ದೊರಕಿದಾಗ ನೆಮ್ಮದಿಯ ಜೀವನ ಸಿಗುತ್ತದೆ. ದೃತಿಗೆಟ್ಟ ಮನಸನ್ನು ಗಟ್ಟಿ ಮಾಡುವ ಕೆಲಸವನ್ನು ವೈದ್ಯರು ಮತ್ತು ನರ್ಸ್‌ಗಳು ಮಾಡುತ್ತಾರೆ. ಅಲ್ಲದೆ ಸಾವನ್ನು ಕಡಿಮೆ ಮಾಡುವುದು ನರ್ಸ್‌ಗಳ ಕೆಲಸವಾಗಿದೆ. ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿ ಎಂದರು. ಹೊಟ್ಟೆಪಾಡಿಗೆ ಮಾಡುವ ಕೆಲಸ ಸೇವೆಯೆನಿಸುವುದಿಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಇನ್‌ಸ್ಟಿಟ್ಯೂಟ್ ಎಂ.ಡಿ. ಡಾ. ಚಂದ್ರಶೇಖರ ಶೆಟ್ಟಿ ಮಾತನಾಡಿ ಹೊನ್ನಾವರಕ್ಕೆ 40 ವರ್ಷಗಳ ಹಿಂದೆ ಆಗಮಿಸಿ ಕ್ಲಿನಿಕ್ ತೆರೆಯಲಾಗಿತ್ತು. ಜನರ ಸಹಕಾರದಿಂದ ನಂತರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗಿದ್ದು, ಹಲವು ವಿಭಾಗಗಳಲ್ಲಿ ಸೇವೆಯ ಸಲ್ಲಿಸಲಾಗುತ್ತಿದೆ. ಅಲ್ಲದೆ ಈಗ ನಾವು ಪ್ರಾರಂಭಿಸಿರುವ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ ಆದ ಮೇಲೆ ತಕ್ಷಣ ಉದ್ಯೋಗಾವಕಾಶ ದೊರಕಿಸಿ ಕೊಡಲು ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಯಲ್ಲಿ ರೋಗಿಗಳಿಗೆ 125 ಹಾಸಿಗೆಯ ವ್ಯವಸ್ಥೆ ಇದ್ದು ನರ್ಸಿಂಗ್ ಕಲಿಯುವವರಿಗೆ ಎಲ್ಲ ರೀತಿಯ ಜ್ಞಾನ ಸಿಗಲು ಅನುಕೂಲವಾಗಿದೆ ಎಂದರು.
ಇದೇ ವೇಳೆ ಭ್ರಾಮರಿ ಸಂಸ್ಥೆಯ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಜಯಶ್ರೀ ಶೆಟ್ಟಿ, ಡಾ. ಭಾರ್ಗವ ಶೆಟ್ಟಿ ಹಾಗೂ ಡಾ. ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಪಿ.ಎಂ. ಹೊನ್ನಾವರ ಸ್ವಾಗತಿಸಿದರು. ವಿಶ್ರಾಂತ ಪ್ರಾಂಶುಪಾಲ ಡಾ. ಎ.ವಿ. ಶಾನಭಾಗ ನಿರ್ವಹಿಸಿದರು.