ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಕಾರ್ಯಚಟುವಟಿಕೆಗಳು ಹುಬ್ಬಳ್ಳಿಗೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಧಾರವಾಡದಲ್ಲಿ ಬಂಟರ ಭವನ ನಿರ್ಮಿಸಲಾಗುವುದು ಎಂದು ಸಂಘದ ನೂತನ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಹೇಳಿದರು.
ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹು-ಧಾ ಬಂಟರ ಸಂಘ ವತಿಯಿಂದ ಶುಕ್ರವಾರ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಂಟರ ಬಾಂಧವ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಮತ್ತು ಸಂಘದ ಸರ್ವ ಸದಸ್ಯರ ಅವಶ್ಯಕತೆಗೆ ತಕ್ಕಂತೆ ಹಿರಿಯ ಮಾರ್ಗದರ್ಶನದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕೆಲಸವನ್ನು ಮಾಡಲಾಗುವುದು ಎಂದರು.ಈಗಾಗಲೇ ಮಾತೃಭೂಮಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸಂಘ ಹಲವಾರು ಯೋಜನೆ ರೂಪಿಸಿ ಜಾರಿಗೊಳಿಸಿದೆ. ಅವುಗಳ ಯಶಸ್ವಿಗೆ ಸಂಘ ಅವಿರತವಾಗಿ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳ ಸಹಕಾರ ಅವಶ್ಯಕ ಎಂದು ಹೇಳಿದರು.
ಪ್ರಮುಖವಾಗಿ ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪದ ಮೂಲಸೌಕರ್ಯ ಅಭಿವೃದ್ಧಿ ಆದ್ಯತೆ ನೀಡಲಾಗುವುದು. ಕಚೇರಿ, ಅಡುಗೆ ಮನೆ, ಊಟದ ಹಾಲ್, ವಾಶ್‌ರೂಂ ನವೀಕರಣ ಕೈಗೊಳ್ಳಲು ಯೋಜಿಸಲಾಗಿದೆ. ಸಂಘದ ಆರ್ಥಿಕ ಸದೃಢತೆ, ಭವಿಷ್ಯದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಾಗುವುದು. ಸಮಾಜದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಒಗಟ್ಟಿನಿಂದ ಕೆಲಸ ಮಾಡೋಣ ಎಂದರು.ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಸಮಾಜದ ಕೆಳಮಟ್ಟದ ಜನರನ್ನು ಸಂಘ ಮೇಲಕ್ಕೆತ್ತುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಹಾಗೆಯೇ ಸಂಘದಲ್ಲಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆ ಮೂಲಕ ಮಹಿಳೆಯರು, ಪುರುಷರ ಸಮ ಎಂಬುದನ್ನು ಸಮಾಜ ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಸತೀಶ್ಚಂದ್ರ ಶೆಟ್ಟಿ ಮಾತನಾಡಿ, ಸಂಘದ ಮಾತೃಭೂಮಿ ಚಾರಿಟೇಬಲ್ ಟ್ರಸ್ಟ್‌ನಿಂದ ಇಟ್ಟಿಗಟ್ಟಿ ಬಳಿ 4 ಎಕರೆ ಜಮೀನು ಖರೀದಿಸಿ ಆರ್‌ಎನ್‌ಎಸ್ ವಿದ್ಯಾನಿಕೇತನ ಸಂಸ್ಥೆ ನಡೆಸಲಾಗುತ್ತಿದೆ. ಆ ಮೂಲಕ ಸಮಾಜದ ಜತೆಗೆ ಇತರೆ ಸಮಾಜದ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನಡೆಯುತ್ತಿದೆ. ಸದ್ಯ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರು.
ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅವರು ನೂತನ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇವರೊಟ್ಟಿಗೆ ಉಪಾಧ್ಯಕ್ಷರಾಗಿ ಸುಧೀರ ಜೆ. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿಯಾಗಿ ರತ್ನಾಕರ ಎಂ. ಶೆಟ್ಟಿ, ಖಜಾಂಚಿಯಾಗಿ ದಿನೇಶ ಕೆ. ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಜ್ಯೋತಿ ಆರ್.ಟಿ. ಶೆಟ್ಟಿ ಅಧಿಕಾರಿ ಸ್ವೀಕರಿಸಿದರು. ಇದಕ್ಕೂ ಪೂರ್ವ ಜ್ಯೂನಿಯರ್ ರಾಜಕುಮಾರ, ಅಂಬರೀಷ, ವಿಷ್ಣುವರ್ಧನ, ಕುಮಾರ ಸಾನು ಅವರು ತಮ್ಮ ಅದ್ಬುತ ನಟನೆ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.