ಮತ್ಸ್ಯ ಸಂಪದ ಯೋಜನೆ ಸಮಗ್ರ ಅನುಷ್ಠಾನಕ್ಕೆ ಕಾರ್ಯಾಗಾರ: ಶಾಸಕ ಯಶ್ಪಾಲ್

| Published : Aug 07 2024, 01:44 AM IST

ಮತ್ಸ್ಯ ಸಂಪದ ಯೋಜನೆ ಸಮಗ್ರ ಅನುಷ್ಠಾನಕ್ಕೆ ಕಾರ್ಯಾಗಾರ: ಶಾಸಕ ಯಶ್ಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಡಳಿತ ನಿರ್ವಹಣಾ ತರಬೇತಿ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ (ಪಿಎಂಎಂಎಸ್‌ವೈ)ಯ ಸಮಗ್ರ ಅನುಷ್ಠಾನಕ್ಕೆ ಉಚ್ಚಿಲದಲ್ಲಿ ಮೀನುಗಾರರಿಗೆ ಮಾಹಿತಿ, ತರಬೇತಿ ಕಾರ್ಯಾಗಾರವು ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಡಳಿತ ನಿರ್ವಹಣಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಕರಾವಳಿ ಹಾಗೂ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಅಗತ್ಯವಿದ್ದು, ಮತ್ಸ್ಯ ಸಂಪದ ಯೋಜನೆಯಡಿ ೨೬,೦೦೦ ಕೋಟಿ ರು. ಅನುದಾನವಿದ್ದರೂ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಅನುದಾನ ಸದ್ಭಳಕೆ ಪಾಲು ಕಡಿಮೆಯಿದೆ. ಕರಾವಳಿಯ ಆರ್ಥಿಕತೆಗೆ ಮೀನುಗಾರಿಕೆ ಬಹುದೊಡ್ಡ ಶಕ್ತಿಯಾಗಿದ್ದು, ಕೇಂದ್ರ, ರಾಜ್ಯದ ಮೀನುಗಾರಿಕಾ ಯೋಜನೆಗಳನ್ನು ಇಲಾಖೆಗಳು ಜನರ ಮನೆಬಾಗಿಲಿಗೆ ತಲುಪಿಸಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕೆ.ಆರ್. ಲಾವಣ್ಯ ಮಾತನಾಡಿ, ಸಹಕಾರಿ ಸಂಘಗಳು ಕಾಲಕಾಲಕ್ಕೆ ಬದಲಾಗುವ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಕನ್ಯಾ, ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಅಧ್ಯಕ್ಷ ರಾಮಚಂದ್ರ ಕುಂದರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಎಚ್. ಗಂಗಾಧರ ಶೆಟ್ಟಿ, ಕೆ. ಕೊರಗ ಪೂಜಾರಿ ಉಪಸ್ಥಿತರಿದ್ದರು.

ಮೀನುಗಾರಿಕಾ ಇಲಾಖಾ ಉಪನಿರ್ದೇಶಕಿ ಟಿ. ಅಂಜನಾದೇವಿ ಮೀನುಗಾರಿಕಾ ಇಲಾಖೆಯ ಯೋಜನೆ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯಗಳ ಕುರಿತು ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ಸೀತಾ ಜೆ.ಎಸ್., ಮಾನವ ಸಂಪನ್ಮೂಲ ಅಭಿವೃದ್ಧಿ, ಗುಂಪು ಅಪಘಾತ ವಿಮಾ ಯೋಜನೆಗಳ ವಿಷಯವಾಗಿ ಮಾಹಿತಿ ನೀಡಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.