ಕೊರತೆ ಇರುವ ಶಿಕ್ಷಕರಿಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ಇಲಾಖೆಯಿಂದ ನೀಡಲಾಗಿದೆ. ತಾಲೂಕಿನ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ, ಫಲಿತಾಂಶ ಸುಧಾರಣೆಗೆ ಅಗತ್ಯವಿರುವ ಎಲ್ಲ ಸಹಾಯ ಸಹಕಾರ ನೀಡಲು ಬದ್ಧನಾಗಿದ್ದೇನೆ.

ಸಂಡೂರು: ತಾಲೂಕಿನ ಬೊಮ್ಮಾಘಟ್ಟ ಗ್ರಾಮದ ಶ್ರೀಹುಲಿಕುಂಟೇರಾಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಉದ್ಘಾಟಿಸಿದರು.ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಸಂಸದ ಈ.ತುಕಾರಾಂ ಹಾಗೂ ನಾನು ತಾಲೂಕಿನ ಬಹುತೇಕ ಎಲ್ಲ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಕೊರತೆ ಇರುವ ಶಿಕ್ಷಕರಿಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ಇಲಾಖೆಯಿಂದ ನೀಡಲಾಗಿದೆ. ತಾಲೂಕಿನ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ, ಫಲಿತಾಂಶ ಸುಧಾರಣೆಗೆ ಅಗತ್ಯವಿರುವ ಎಲ್ಲ ಸಹಾಯ ಸಹಕಾರ ನೀಡಲು ಬದ್ಧನಾಗಿದ್ದೇನೆ. ಎಸ್‌ಎಸ್‌ಎಲ್‌ಸಿ ಫಲಿತಾಂಶವೇ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಭದ್ರ ಬುನಾದಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಹರಿಪ್ರಸಾದ್ ಅವರು ಕನ್ನಡ ವ್ಯಾಕರಣ, ಪತ್ರಲೇಖನ, ಕವಿಪರಿಚಯ, ಕಲಿಯುವ ಸರಳ ವಿಧಾನಗಳನ್ನು ಮಕ್ಕಳಿಗೆ ಕಲಿಸಿದ್ದು ಮಕ್ಕಳಲ್ಲಿ ಸಂತಸವನ್ನುಂಟು ಮಾಡಿತು. ಬೊಮ್ಮಾಘಟ್ಟದ ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ೧೦೦೦ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸನ್ಮಾರ್ಗ ಗೆಳೆಯರ ಬಳಗದ ಜಡೇಶ ಎಮ್ಮಿಗನೂರು ಪ್ರಾರ್ಥಿಸಿದರು. ಇಸಿಒ ಗೂಳೆಪ್ಪ ಕಾರ್ಯಕ್ರಮ ನಿರೂಪಿಸಿದರು. ಸನ್ಮಾರ್ಗ ಗೆಳೆಯರ ಬಳಗದ ಮೆಹತಾಬ್, ಕಾರ್ಯದರ್ಶಿ ಚಂದ್ರಶೇಖರ ಆಚಾರ್, ಮುಖ್ಯಶಿಕ್ಷಕರಾದ ವಿ ಹನುಮಂತಪ್ಪ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಂಗಿ ನಾಗರಾಜ್, ಅಮರೇಶ್ ಸೊನ್ನದ್, ರಾಜಕುಮಾರ್, ರಮೇಶ್, ಷಣ್ಮುಖರಾವ್, ಮಹೇಶ್ವರಪ್ಪ, ಎಚ್.ಡಿ. ಸಿದ್ದೇಶ್, ಪಾಲಾಕ್ಷಪ್ಪ, ರಘುಪತಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ಬೊಮ್ಮಾಘಟ್ಟ ಗ್ರಾಮದ ಹುಲಿಕುಂಟೇರಾಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರವನ್ನು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಉದ್ಘಾಟಿಸಿದರು.