ಇನ್ ಸ್ಟ್ರಾಗ್ರಾಂ ನೋಡ್ತಾ ಮೆದುಳು ಸುಸ್ತು ಮಾಡ್ಬೇಡಿ

| Published : Jul 23 2024, 12:39 AM IST

ಸಾರಾಂಶ

World brain day celebration in chitradurga

-ವಿಶ್ವ ಮೆದುಳು ದಿನಾಚರಣೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ ರವೀಂದ್ರ ಸಲಹೆ

----

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಮಾಜಿಕ ಜಾಲ ತಾಣಗಳ ಪ್ರಮುಖ ವೇದಿಕೆಗಳಾದ ಫೇಸ್ ಬುಕ್, ಇನಸ್ಟ್ರಾಗ್ರಾಂ, ವಾಟ್ಸಾಪ್ ಗಳ ಅತಿಯಾದ ಮೊರೆ ಹೋಗದೆ ಮೆದುಳು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.

ಆರೋಗ್ಯ ಇಲಾಖೆಯ ಬಿ.ಸಿ ರಾಯ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮೆದುಳು ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಉತ್ತಮ ಚಟುವಟಿಕೆಗಳ ಮೂಲಕ ಮೆದುಳು ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೃದಯ, ಕಿಡ್ನಿ ಮತ್ತು ದೈಹಿಕ ಕಾಯಿಲೆಗಳ ಕಾರ್ಯಕ್ರಮಗಳಂತೆ ಈಚೆಗೆ ಮೆದುಳು ಆರೋಗ್ಯ ಕಾರ್ಯಕ್ರಮವು ಪ್ರಾರಂಭಿಸಿರುವುದು ಸಂತಸದ ಸಂಗತಿ. ಎಲ್ಲರೂ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಒತ್ತಡದ ಜೀವನದಲ್ಲಿ ನಾವೆಲ್ಲರೂ ಆಧುನಿಕ ಸಾಧನ ಸಲಕರಣೆಗಳಾದ ಮೊಬೈಲ್ ಫೋನ್, ಇಂಟರ್‌ ನೆಟ್‌, ಲ್ಯಾಪ್‍ಟ್ಯಾಪ್, ಯೂಟ್ಯೂಬ್ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದೇವೆ. ಮೆದುಳು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಜಿ.ಒ.ನಾಗರಾಜ್ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಜೊತೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮ ಪ್ರಾರಂಭವಾಗಿದೆ. ಮನುಷ್ಯನಿಗೆ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮೆದುಳು ಆರೋಗ್ಯ ಬಹು ಮುಖ್ಯ. ವಿಶೇಷವಾಗಿ ಮೆದುಳು ಆರೋಗ್ಯದಲ್ಲಿ ಡಿಮೆನ್ಷಿಯ, ಪಾರ್ಶ್ವವಾಯು, ತಲೆನೋವು, ಅಪಸ್ಮಾರ ಮತ್ತು ಮೂರ್ಛೆರೋಗಗಳನ್ನು ಒಳಗೊಂಡಿದೆ.

ನಿತ್ಯವೂ ವ್ಯಾಯಾಮ ಯೋಗ ಮತ್ತು ಧ್ಯಾನ ಮೊದಲಾದವುಗಳ ಮೂಲಕ ಮೆದುಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನರರೋಗ ತಜ್ಞ ಡಾ.ಆರ್.ಕಿರಣ್ ಗೌಡ ಉಪನ್ಯಾಸ ನೀಡಿ, ಮೆದುಳು ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕು. ಮೂರ್ಚೆ ರೋಗದಂತಹ ಕಾಯಿಲೆಗಳಲ್ಲಿ ಹಲವಾರು ಲಕ್ಷಣಗಳಿವೆ. ಬಾಯಲ್ಲಿ ನೊರೆ ಬರುವುದು, ಪ್ರಜ್ಞೆ ತಪ್ಪಿ ಬೀಳುವುದು ಸ್ವಲ್ಪ ಸಮಯ ಒಂದೇ ಭಂಗಿಯಲ್ಲಿರುವುದು, ಕಣ್ಣುಗಳು, ಬಾಯಿ ಕೈ ಕರಗಳು ಚಲನೆ ಇಲ್ಲದಿರುವುದು ಪ್ರಮುಖ ಚಹರೆ. ನಾವು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಆಂಟಿ ಎಪಿಲೆಫ್ಟಿಕ್ ಮಾತ್ರೆಗಳನ್ನು ವೈದ್ಯರಿಂದ ಪಡೆದು ಗುಣಮುಖರಾಗಬೇಕು ಎಂದರು.

ಪಾರ್ಶ್ವವಾಯು ಆದಾಗ ತಲೆನೋವು ಬಂದಂತಹ ಸಂದರ್ಭದಲ್ಲಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ನರರೋಗ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ದೈಹಿಕ ಚಟುವಟಿಕೆಗಳು ವ್ಯಾಯಾಮ, ವಾಕಿಂಗ್, ಯೋಗ ಮತ್ತು ಧ್ಯಾನ, ಸರಿಯಾದ ನಿದ್ರೆ ಮೂಲಕ ಮೆದುಳು ಆರೋಗ್ಯಕರವಾಗಿ ಇರಿಸಬೇಕು ಎಂದು ತಿಳಿಸಿದರು. ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಆಯೋಜಿಸಲಾದ ಜಾಗೃತಿ ಜಾಥಾಕ್ಕೆ ಇದೇ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಜಿ.ಓ.ನಾಗರಾಜ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ ಗಿರೀಶ್ ಚಾಲನೆ ನೀಡಿದರು

ಎಬಿಆರ್‍ಕೆ ಸಮಾಲೋಚಕ ಡಾ.ಚಂದ್ರಶೇಖರ್ ರಾಜು, ಪಿಜಿ ವೈದ್ಯ ಡಾ.ಪ್ರಮೋದ್ ಭಟ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ಕ್ಲಿನಿಕಲ್ ಸೈಕಲಾಜಿಸ್ಟ್ ಶ್ರೀಧರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ.ತಿಪ್ಪೇಶ್, ಪ್ರವೀಣ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸುನೀತಾ ರಶ್ಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಇದ್ದರು.

--------------

ಪೋಟೋ: 22 ಸಿಟಿಡಿ 1ಆರೋಗ್ಯ ಇಲಾಖೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಮೆದುಳು ದಿನಾಚರಣೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಉದ್ಘಾಟಿಸಿದರು.

------