ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಕುಮಾರ್ ಅವರು ಸೊಳ್ಳೆಗಳ ಮೂಲಕ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ದಿನದ ಉದ್ದೇಶವಾಗಿದೆ ಎಂದು ತಿಳಿಸಿದರು. ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಶ್ರೀನಿವಾಸ್ ಅವರು ಮಾತನಾಡಿ, ರೊನಾಲ್ಡ್ ರಾಸ್ ಅವರು ಭಾರತದಲ್ಲಿ 1897 ರಲ್ಲಿ ಸೊಳ್ಳೆ ಮತ್ತು ಪರೋಪಜೀವಿಯ ನಡುವಿನ ಸಂಬಂಧವನ್ನು ಕಂಡುಹಿಡಿದ ಈ ದಿನದ ಮಹತ್ವದ ಬಗ್ಗೆ ವಿವರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್ ಅವರು, ಹರಡುವ ರೋಗ ಮಲೇರಿಯಾ ಡೆಂಗಿ, ಚಿಕೂನ್ ಗುನ್ಯ, ಆನೆಕಾಲು ರೋಗ ಸೋಂಕಿತ ಸೊಳ್ಳೆಗಳ ಬಗ್ಗೆ ಸ್ಲೈಡ್ ಗಳ ಪ್ರದರ್ಶನದ ಮೂಲಕ ಮಾಹಿತಿ ಮತ್ತು ಚಿಕಿತ್ಸೆಗಳ ಬಗ್ಗೆ ವಿವರಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಅವರು ಸೊಳ್ಳೆಗಳ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು, ಹೂವಿನ ಕುಂಡ, ಟೈರ್ ತೆಂಗಿನ ಚಿಪ್ಪು, ಡಬ್ಬಿ ಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು, ನೀರಿನ ತೊಟ್ಟಿ ಮುಚ್ಚಿಡಬೇಕು, ಸೊಳ್ಳೆ ಪರದೆ ಬಳಸಬೇಕು, ಜ್ವರ ತಲೆನೋವು, ಚಳಿ, ದೇಹದಲ್ಲಿ ನೋವು, ಕಾಣಿಸಿಕೊಂಡರೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಪರೀಕ್ಷಿಸಿಕೊಳ್ಳಲು ಮತ್ತು ಮಲೇರಿಯಾ ವನ್ನು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ಸಲಹೆ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ ಇವರು ಸೊಳ್ಳೆಗಳ ಜೀವಿತಾವಧಿ ಬಗ್ಗೆ ಮತ್ತು ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ತಿಳಿಸಿದರು.