ಆರ್‌ಸಿಯುನಲ್ಲಿ ವಿಶ್ವ ದಿವ್ಯಾಂಗರ ದಿನಾಚರಣೆ

| Published : Jan 14 2024, 01:31 AM IST

ಸಾರಾಂಶ

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಕಲಚೇತನರ ಸಬಲೀಕರಣ ಕೋಶವು ಸಮಾಜಕಾರ್ಯ ವಿಭಾಗದ ಸಹಯೋಗದೊಂದಿಗೆ ಈಚೇಗೆ ವಿಶ್ವ ದಿವ್ಯಾಂಗರ ದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಕಲಚೇತನರ ಸಬಲೀಕರಣ ಕೋಶವು ಸಮಾಜಕಾರ್ಯ ವಿಭಾಗದ ಸಹಯೋಗದೊಂದಿಗೆ ಈಚೇಗೆ ವಿಶ್ವ ದಿವ್ಯಾಂಗರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಅಭಿಪ್ರೇರಣೆಯಾಗಿ ಶೇ.90 ರಷ್ಟು ದಿವ್ಯಾಂಗತೆಯನ್ನು ಹೊಂದಿರುವ ಶಿಕ್ಷಣ ತಜ್ಞ ಹಾಗೂ ಉದ್ಯಮಶೀಲ ಗಜಾನನ ಸಾಬಣ್ಣನವರ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಜೀವನ ನಡೆಸುವ ಕೌಶಲ್ಯ, ಜೀವನದಲ್ಲಿ ಸಾಧಿಸಲು ಮಾಡಬೇಕಾದ ಪ್ರಯತ್ನಗಳು, ಸಾಧಕರಾಗಲು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಿದರು. ಕನಸು ಕಾಣಬೇಕು ಹಾಗೂ ಕನಸ್ಸನ್ನು ಸಾಕಾರಗೊಳಿಸಲು ಗುರಿ ಉದ್ಧೇಶಗಳನ್ನು ಇಟ್ಟುಕೊಂಡು ಮುಂದುವರಿಯಬೇಕೆಂದು ಕರೆಕೊಟ್ಟರು. ಪರೀಕ್ಷೆಗಳನ್ನು ಎದುರಿಸುವ ತಂತ್ರಗಾರಿಕೆಯನ್ನು ಹೇಳಿಕೊಟ್ಟರು. ಇದರ ಜತೆಗೆ ಅಂಗವೈಕಲ್ಯತೆಯ ಬಗ್ಗೆ ಮಾತನಾಡಿದ ಅವರು ಅಂಗವೈಕಲ್ಯತೆ ಒಂದು ವೈಕಲ್ಯತೆ ಅಲ್ಲ, ಸಾಮರ್ಥ್ಯಭರಿತವಾದುದು. ನಾನು ಅಂಗವಿಕಲನಲ್ಲ, ನಾನು ವಿಭಿನ್ನ ಮಾದರಿ ಎಂದು ಹೇಳುವ ಮೂಲಕ ವಿಶ್ವ ದಿವ್ಯಾಂಗ ದಿನದ ಮಹತ್ವವನ್ನು ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್‌ಸಿಯು ಕುಲಸಚಿವೆ ರಾಜಶ್ರೀ ಜೈನಾಪುರ ಮಾತನಾಡಿ, ಕೆಎಎಸ್‌ ಅಧಿಕಾರಿಯಾಗಿ ಹೊರಹೊಮ್ಮಲು ಅನುಸರಿಸಿದ ಮಾರ್ಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಕಲಚೇತನರ ಸಬಲೀಕರಣ ಕೋಶಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಭರತ ಕಟ್ಟಿ, ದಿವ್ಯಾಂಗರ ಸಬಲೀಕರಣ ಕೋಶದ ಸಂಯೋಜಕಿ ಡಾ. ಸುಷ್ಮಾ ಆರ್, ಸಮಾಜಕಾರ್ಯದ ಮುಖ್ಯಸ್ಥ ಡಾ. ಅಶೋಕ ಆಂಟೋನಿ ಡಿಸೋಜಾ, ಡಾ. ಸಿದ್ಧಲಿಂಗೇಶ್ವರ ಬಿದರಳ್ಳಿ, ಡಾ. ಸಂತೋಷ ಪಾಟೀಲ, ಈ ಕಾರ್ಯಕ್ರಮಕ್ಕೆ ಎಲ್ಲಾ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂಧಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. . ವರ್ಷಾ ಮತ್ತು ವೀಣಾ ಪ್ರಾರ್ಥಿಸಿದರು. ದಿವ್ಯಶ್ರೀ ಹಾಗೂ ಯಲ್ಲಪ್ಪ ನಿರೂಪಿಸಿದರು.