ಪುತ್ತೂರು: ಭೂಮಿಯ ಮೇಲೆ ಮಾನವನ ದಬ್ಬಾಳಿಕೆ ಅವಿರತವಾಗಿ ನಡೆಯುತ್ತಲೇ ಇದೆ. ತನ್ನ ದುರಾಸೆ ತ್ಯಜಿಸಿ ತಾನು ಬದುಕುವ ನೆಲ ಜಲಕ್ಕೆ ಒಂದಿಷ್ಟು ಗೌರವವನ್ನು ನೀಡಿದರೆ ಮಾತ್ರ ಮುಂದಿನ ಜನಾಂಗಕ್ಕೂ ಇಲ್ಲಿ ಬದುಕಲು ಸಾಧ್ಯ ಎಂದು ಬೆಂಗಳೂರಿನ ಎಐಡಾಷ್ ಸಂಸ್ಥೆಯ ತಂತ್ರಜ್ಞ ಸೂರಜ್ ರಾಜ್.ಎಸ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ನಡೆದ ವಿಶ್ವ ಭೂಮಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಕೈಗಾರಿಕೀಕರಣ, ಅಡವಿಗಳ ನಾಶ, ಕಾಂಕ್ರೀಟು ಕಾಡುಗಳ ನಿರ್ಮಾಣದಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಜಾಗತಿಕ ತಾಪವಾನವು ಹೆಚ್ಚುತ್ತಿದೆ, ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ವಿಷಪೂರಿತ ತ್ಯಾಜ್ಯಗಳು ಪರಿಸರವನ್ನು ಸೇರುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಈ ಭೂಮಿಯಲ್ಲಿ ವಾಸಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಉಂಟಾಗಬಹುದು ಎಂದರು.ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಉಪಸ್ಥಿತರಿದ್ದರು. ವಿಶ್ವ ಭೂಮಿ ದಿನದ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮ ಸಂಯೋಜಕ ಡಾ.ರಾಜೇಶ್ ಆರ್ ಸ್ವಾಗತಿಸಿ, ಶ್ಯಾಮ್ ಕುಮಾರ್ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.