ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶ್ವ ಹೃದಯ ಸಮ್ಮೇಳನ ಉದ್ಘಾಟನೆ

| Published : Dec 28 2024, 01:00 AM IST

ಸಾರಾಂಶ

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯುವ ತ್ರಿದಿನಗಳ ವಿಶ್ವ ಹೃದಯ ಸಮ್ಮೇಳನ ಶುಕ್ರವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಹೃದಯಾಂತರಾಳದ ಭಕ್ತಿಯಿಂದ ಭಗವಂತನ ಆರಾಧನೆ ಮಾಡುವುದರಿಂದ ಶ್ರೇಯಸ್ಸು ಖಂಡಿತಾ. ಹೃದಯ ನಿರ್ಮಲವಾಗಿದ್ದರೆ ಬದುಕು ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯುವ ತ್ರಿದಿನಗಳ ವಿಶ್ವ ಹೃದಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ನಮ್ಮ ಬದುಕು ಅಸಾಧಾರಣವಾಗಲು ಕಾರಣ ಭಗವಂತ. ಭಗವಂತನ ಬಗ್ಗೆ ಹೃದಯದಿಂದ ಭಕ್ತಿ ಹೊಂದುವುದು ನಮ್ಮ ಆದ್ಯ ಕರ್ತವ್ಯ. ನಮ್ಮನ್ನು ಸೃಷ್ಟಿ ಮಾಡಿ ಸುಂದರ ಬದುಕನ್ನು ಕೊಟ್ಟ ದೇವರಿಗೆ ಕೃತಜ್ಞತೆಯ ಭಕ್ತಿ ಮೂಲಕ ಸಲ್ಲಿಸುವ ಹೃದಯ ನಮ್ಮದಾಗಬೇಕು ಎಂದರು.

ಹೊಸದುರ್ಗದ ಸದ್ಗುರು ಸೇವಾಶ್ರಮದ ಶ್ರೀ ಶ್ರೀಕಂಠಾನಂದ ಸರಸ್ವತಿ ಮಹರಾಜ್, ಹಿರಿಯೂರು ಶ್ರೀ ದತ್ತಾಶ್ರಮದ ಶ್ರೀ ಸುಬೊಧಾನಂದ ಸ್ವಾಮೀಜಿ, ಬೆಂಗಳೂರಿನ ಲಲಿತ ಮಂದಿರದ ಶ್ರೀಕಂಠ ಗುರೂಜಿ ಆಶೀರ್ವಚನ ನೀಡಿದರು.

ಸುಬ್ರಹ್ಮಣ್ಯ ಮಠದ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ಪ್ರಮುಖರಾದ ಹೊಸದುರ್ಗದ ಡಾ.ರವೀಂದ್ರ ಮುಖ್ಯ ಅತಿಥಿಗಳಾಗಿದ್ದರು. ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಕೋಶಾಧಿಕಾರಿ ರಮೇಶ್ಚಂದ್ರ ಸ್ವಾಗತಿಸಿದರು. ಟ್ರಸ್ಟಿ ಕಾರ್ಯದರ್ಶಿ ಸತೀಶ್‌ಜಿ ಪ್ರಸ್ತಾಪಿಸಿ ವಂದಿಸಿದರು.

ಬಳಿಕ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಸಿದ್ಧಿ ಯೋಗ ಚಟುವಟಿಕೆಯ ಬಗ್ಗೆ ವಿಮರ್ಶೆ ನಡೆಯಿತು.ಈ ಮೊದಲು ಅನ್ನಪೂರ್ಣೇಶ್ವರಿ ಆರತಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತು.ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಿಂದ ಸಿದ್ಧಿ ಯೋಗ ಮಾಡಿದ ಸ್ವಯಂಸೇವಕರು ಮಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಪಾದಯಾತ್ರೆಯಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದರು.