ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ, ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ‘ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ’ ದ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.
ಉಡುಪಿ ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ, ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ‘ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ’ ದ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ಮಾತನಾಡಿ, ಅಯೋಡಿನ್ ನಮ್ಮ ದೇಹಕ್ಕೆ ಬೇಕಾಗುವ ಸೂಕ್ಷ್ಮ ಪೋಷಕಾಂಶ, ಕತ್ತಿನ ಮುಂಭಾಗದಲ್ಲಿ ಥೈರಾಯ್ಡ್ ಗ್ರಂಥಿಯಿಂದ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಅಯೋಡಿನ್ ಅಂಶ ಬಹಳ ಮುಖ್ಯ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತೀ ವರ್ಷ ರಾಷ್ಟ್ರದಾದ್ಯಂತ ಅ. 21 ರಿಂದ 27 ರವರೆಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. ಅಯೋಡಿನ್ ಸೇವನೆಯ ಪ್ರಾಮುಖ್ಯತೆ ಹಾಗೂ ದೇಹದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮತ್ತು ಅಯೋಡಿನ್ಯುಕ್ತ ಉಪ್ಪಿನ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಹುಚ್ಚೇಶ್ ಮಾತನಾಡಿ, ಹೆಂಗಸರಲ್ಲಿ ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರಲ್ಲಿ ಅಯೋಡಿನ್ ಮಟ್ಟ ಕಡಿಮೆ ಆದರೆ ಗರ್ಭಪಾತ, ಸಂತಾನೋತ್ಪತ್ತಿ ತೊಂದರೆ, ಶಿಶುವಿನ ಮೆದುಳಿನ ಮೇಲೆ ಸರಿಪಡಿಸಲಾಗದಂತ ತೊಂದರೆ ಉಂಟಾಗಬಹುದು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಪಿಡೆಮಿಯಾಲಜಿಸ್ಟ್ ಡಾ.ತೇಜಸ್ವಿನಿ ಇವರು ಅಯೋಡಿನ್ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳು, ತಡೆಗಟ್ಟುವ ವಿಧಾನಗಳ ಬಗ್ಗೆ ಹಾಗೂ ಮೈಕ್ರೋಬಯಾಲಜಿಸ್ಟ್ ಅಶ್ವಿನಿ ಉಪ್ಪಿನಲ್ಲಿ ಅಯೋಡಿನ್ ಅಂಶವನ್ನು ಪತ್ತೆಹಚ್ಚುವ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಧಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿದರು.