ಮಡಿಕೇರಿಯಲ್ಲಿ ಮೇಳೈಸಿದ ವಿಶ್ವ ಕೊಡವ ಸಮ್ಮೇಳನ

| Published : Dec 30 2023, 01:15 AM IST

ಸಾರಾಂಶ

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ವಿಶ್ವ ಕೊಡವ ಸಮ್ಮೇಳನ ಉದ್ಘಾಟನೆಗೊಂಡಿತು. ಸಾವಿರಾರು ಕೊಡವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿ ಆಯೋಜನೆಗೊಂಡ ವಿಶ್ವ ಕೊಡವ ಸಮ್ಮೇಳನಕ್ಕೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆಯಿತು.ನಗರದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಸಾವಿರಾರು ಕೊಡವ ಕೊಡವತಿಯರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡರು. ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೆರವಣಿಗೆ ಸಮಾವೇಶಗೊಂಡಿತು. ಮೆರವಣಿಗೆಯನ್ನು ಕೊಡವ ಸಾಂಪ್ರದಾಯಿಕ ವಾಲಗ ಮುನ್ನಡೆಸಿತು. ವಿವಿಧ ಕೊಡವ ಕುಟುಂಬಗಳು ತಮ್ಮ ಕುಟುಂಬದ ಹೆಸರು ಸೂಚಿಸುವ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.ವಿಶ್ವ ಕೊಡವ ಸಮ್ಮೇಳನ ಅಂಗವಾಗಿ ಕೊಡವರ ಸಂಸ್ಕೃತಿಯ ಪ್ರತೀಕವಾದ ಐನ್‌ಮನೆಯನ್ನು ರಚಿಸಲಾಗಿತ್ತು. ಮನೆಯಲ್ಲಿ ಹಿಂದಿನ ಕಾಲದ ಪರಿಕರಗಳನ್ನು ಕೂಡ ಇಡಲಾಗಿತ್ತು. ಅಲ್ಲದೆ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಕೊಡವರ ಆಚಾರ- ವಿಚಾರ, ಪದ್ಧತಿ, ಆಹಾರ, ಚಿನ್ನಾಭರಣ, ಸಂಸ್ಕೃತಿ, ವಿವಾಹ ಸಂಪ್ರದಾಯ ಸೇರಿದಂತೆ ಹಲವು ಬಗೆಯ ಮಾಹಿತಿಯ ಒಳಗೊಂಡಿರುವ ವಿಷಯವನ್ನು ಬೃಹತ್ ಬ್ಯಾನರ್‌ನಲ್ಲಿ ಹಾಕಲಾಗಿತ್ತು.ಮೈದಾನದಲ್ಲಿ ಸುಮಾರು 30ಕ್ಕೂ ಅಧಿಕ ಬಗೆಯ ಮಳಿಗೆಗಳು ಗಮನ ಸೆಳೆಯಿತು. ಕೊಡವರ ಸಾಂಪ್ರದಾಯಿಕ ಉಡುಪುಗಳು, ಚಿತ್ರಕಲೆ, ಕೊಡವರ ಸಾಂಪ್ರದಾಯಿಕ ಖಾದ್ಯಗಳು, ಆಭರಣಗಳು ಸೇರಿದಂತೆ ವಿವಿಧ ಮಳಿಗೆಗಳು ಇದ್ದವು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡವ ಮಕ್ಕಡ ಕೂಟದಿಂದ ಕೊಡವ ಭಾಷಾ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಕೂಡ ಇತ್ತು.ಮೈದಾನದ ವೇದಿಕೆ ಹಿಂಭಾಗದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಮಹಿಳೆಯರು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡವರ ಪದ್ಧತಿಯಂತೆ ಗುರು ಕಾರೋಣರಿಗೆ ಅಕ್ಕಿ ಹಾಕಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಗಳಾಗಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷರು, ದೇಶ ತಕ್ಕರಾದ ಪರದಂಡ ಸುಬ್ರಮಣಿ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಪ್ರಯತ್ನದಿಂದ ಕೊಡವರ ಸಮಸ್ಯೆಗೆ ಪರಿಹಾರ ದೊರೆಯುವಂತೆ ಆಗಲಿ. ಇದಕ್ಕೆ ಎಲ್ಲರೂ ಕೈ ಜೋಡಿಸುವಂತೆ ಆಗಬೇಕು ಎಂದು ಆಶಿಸಿದರು.

ಕೊಡಗಿನ ಭೂಮಿಯನ್ನ ಉಳಿಸಿಕೊಳ್ಳಬೇಕು, ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದು, ಮತ್ತೆ ಹೊರಗಿನಿಂದ ಬಂದ ಕೊಡವರು ಕೊಡಗಿನಲ್ಲಿ ಭೂಮಿ ಖರೀದಿ ಮಾಡುವಂತೆ ಆಗಬೇಕು. ಹೀಗೆ ವಿನಾಶದ ಅಂಚಿನಲ್ಲಿರುವ ಕೊಡವಾಮೆಯನ್ನು ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕೆಂದ ಅವರು ಕೊಡವ ಹೋರಾಟಗಾರರಿಗೆ ಅಖಿಲ ಕೊಡವ ಸಮಾಜದ ಬೆಂಬಲ ಎಂದಿಗೂ ಇರಲಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಬುದ್ನ ಸಿದ್ಧಿ ಮಾತನಾಡಿ, ಕೊಡಗಿನ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಸಂಸ್ಕೃತಿ, ಪರಂಪರೆ ಹಾಗೂ ದೇಶದ ವಿವಿಧೆಡೆ ಸೇರಿರುವ ಕೊಡವರನ್ನು ಒಂದೆಂಡೆ ಸೇರಿಸಲು ಮಾಡುವಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿ ಆಗಬೇಕು. ನಮ್ಮ ಪದ್ಧತಿಯನ್ನು ಸ್ವತಃ ಆಚರಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ಕೊಡವರನ್ನು ಪರಿಶಿಷ್ಟರ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ಮಾಡುತ್ತಾರೆ. ಅಲ್ಲಿ ಕೊಡವರ ಸಮಸ್ತ ಜೀವನ ಕ್ರಮ ಅಧ್ಯಯನ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯ ಮಾಡಬೇಕು. ಕೊಡವರು ಇದನ್ನು ಅನುಸರಿಸಿದ್ದಲ್ಲಿ ಮುಂದಿನ ಕ್ರಮವನ್ನು ಜನಪ್ರತಿನಿಧಿಗಳು ಮಾಡುತ್ತಾರೆಂದರು.

ಟ್ರಸ್ಟ್ ನಿರ್ದೇಶಕ ಪಾಲೇಂಗಡ ಅಮಿತ್ ಭೀಮಯ್ಯ ಮಾತನಾಡಿ, ಐದು ವರ್ಷಗಳಿಂದ ಕೊಡವಾಸ್ ಕನೆಕ್ಟಿಂಗ್ ಈ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದೆ. ಜಾಗೃತಿ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರ ಡಾ.ಚೇತನ್ ಸಿಂಘೈ, ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ‌. ಶಿಕ್ಷಣದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ. ಶಿಕ್ಷಣ ಅನುಭವ ಕಲಿಸಿದರೆ ಕಲಿಕೆಯಿಂದ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತ ಪೂವಯ್ಯ, ಟ್ರಸ್ಟ್ ಅಧ್ಯಕ್ಷ ನೀರನ್ ನಾಚಪ್ಪ ಮಾತನಾಡಿದರು.ಕೊಡವರು ಒಗ್ಗಟ್ಟಿನಿಂದ ಇರಬೇಕು: ಎ.ಎಸ್. ಪೊನ್ನಣ್ಣಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ನಮ್ಮ ಉಳಿವಿಗಾಗಿ ನಮ್ಮ ಹಕ್ಕು ಏನು ಎಂಬುದನ್ನು ಪ್ರತಿಪಾದನೆ ಮಾಡಲು ಈ ಕಾರ್ಯಕ್ರಮ ವೇದಿಕೆ ಒದಗಿಸಬೇಕು. ನಮ್ಮದು ಸಣ್ಣ ಸಮುದಾಯದವರಾದರೂ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.ನಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಸರ್ಕಾರಕ್ಕೆ ತಿಳಿಸುವ ಕಾರ್ಯವಾಗಬೇಕಿದೆ. ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲದೇ ಹೋದರೆ ನಮ್ಮ ಬೇಡಿಕೆ ಈಡೇರಿಕೆ ಕಷ್ಟ ಸಾಧ್ಯ. ಇದರ ಬಗ್ಗೆ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ. ನಮ್ಮ ಭೂಮಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದು ಏಕೆ ಎಂದು ನಾವು ಪ್ರಶ್ನಿಸಬೇಕಿದೆ ಎಂದರು.ನಮ್ಮ ಕೋವಿ ಹಕ್ಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಲಾಯಿತು. ಇದಕ್ಕೆ ವಿವಿಧ ಸಂಘಟನೆಗಳು ಮುಂದೆ ಬಂದು ಹೋರಾಟ ನಡೆಸಬೇಕಾದ ಅಗತ್ಯ ಇದೆ. ಚಿಕ್ಕ ಜನಸಂಖ್ಯೆ ಇರುವ ಕೊಡವರಲ್ಲಿ ಒಗ್ಗಟ್ಟು ಕೂಡ ಇಲ್ಲ. ಹೀಗಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹಿಂದುಳಿಯಲಿದ್ದೇವೆ. ಆದರಿಂದ ಕೊಡವರು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ಯಾವ ಪಕ್ಷದವರಿಗೂ ನಮ್ಮ ಮೇಲೆ ದ್ವೇಷವಿಲ್ಲ. ಅದಕ್ಕೆ ಕಾರಣ ಎಂದರೆ ನಾವು ಪ್ರಾಮಾಣಿಕರು. ಸತ್ಯ, ನೇರವಂತಿಕೆ. ಇದನ್ನು ಉಳಿಸಿಕೊಂಡು, ಮಕ್ಕಳಿಗೂ ತಿಳಿಸಬೇಕಾದ ಅಗತ್ಯ ಇದೆ. ಕೊಡವರ ಹಕ್ಕಿಗಾಗಿ ಕುಲಶಾಸ್ತ್ರ ಅಧ್ಯಯನ ಆಗಲೇಬೇಕು. ಈ ಕೆಲಸವನ್ನು ನಾನು ಮಾಡುತ್ತೇನೆ. ಸಂಬಂಧಿಸಿದವರ ಗಮನಕ್ಕೆ ಈ ವಿಚಾರ ತಂದಿದ್ದೇನೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸೋಣ ಎಂದು ಹೇಳಿದರು.ಇಂದು ಸಾಂಪ್ರದಾಯಿಕ ನೃತ್ಯಭಾನುವಾರ ಮೈದಾನದಲ್ಲಿ ಕೊಡವ ಸಾಂಪ್ರದಾಯಿಕ ನೃತ್ಯ ಸ್ಪರ್ಧೆ ನಡೆಯಲಿದೆ. ಬಾಳೋಪಾಟ್, ಬಟ್ಟೆಪಾಟ್, ತಾಲಿಪಾಟ್, ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಸಂಬಂಧ ಪರಜೆ, ಉಮ್ಮತ್ತಾಟ್, ವಾಲಗತ್ತಾಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದೆ.