ಕನ್ನಡಪ್ರಭ ವಾರ್ತೆ ಬೆಳಗಾವಿ
ಜಗತ್ತು ಸರ್ವನಾಶವಾಗುವ ಮುಂಚೆ, ಜಗತ್ತಿನ ಎಲ್ಲ ರಾಷ್ಟ್ರ ನಾಯಕರು ಎಚ್ಚರಗೊಳ್ಳಬೇಕಿದೆ. ಪ್ರಪಂಚದ ಎಲ್ಲ ರಾಷ್ಟ್ರಗಳು ಸಾಮರಸ್ಯದಿಂದ ಬದುಕಬೇಕಾಗಿದೆ ಎಂದು ಅಖಿಲ ಭಾರತ ದ್ವಿತೀಯ ಕವಿಪೀಠ ಮಹಾಸಮ್ಮೇಳನದ ಸರ್ವಾಧ್ಯಕ್ಷ, ಅಥಣಿಯ ಸಾಹಿತಿ ಹಾಗೂ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ 2025ರ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು ಸಹಯೋಗದಲ್ಲಿ ಜರುಗಿದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಗುರು-ನಮನ ನುಡಿ ಕಾರ್ಯಕ್ರಮ, ಜ್ಞಾನ ದಾಸೋಹದ ಜೋಳಿಗೆ ಗ್ರಂಥ ಬಿಡುಗಡೆ, ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಮಹಿಳಾ ದಿನಾಚರಣೆ ಹಾಗೂ ಅಖಿಲ ಭಾರತ ದ್ವಿತೀಯ ಕವಿಪೀಠ ಮಹಾ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಕ್ಷಿಪಣಿ ಮಳೆ ಸುರಿಸುತ್ತಿವೆ. ಇರಾನ್ ಕೂಡ ಪ್ರತಿ ದಾಳಿ ಮಾಡುತ್ತಿದೆ. ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎಲ್ಲ ದೇಶಗಳಲ್ಲೂ ಸ್ಮಶಾನ ಮೌನ ಆವರಿಸಿದೆ. ಎಲ್ಲ ದೇಶಗಳ ಮೇಲೆ ಯುದ್ಧದ ಕರಿ ನೆರಳು ವ್ಯಾಪಿಸುತ್ತಿದೆ. ಯುದ್ಧ ಯಾವ ಪುರುಷಾರ್ಥಕ್ಕಾಗಿ ಜರುಗುತ್ತದೆ. ಒಬ್ಬರ ಅಹಮಿಕೆ ತಣಿಸಲು, ಇನ್ನೊಬ್ಬರ ಅಹಮಿಕೆ ಮಣಿಸಲು ಯುದ್ಧವಲ್ಲವೇ?. ಇದರೊಂದಿಗೆ ವ್ಯಾಪಾರ ಮನೋಭಾವ, ಹಣದ ದಾಹ, ಅಧಿಕಾರದ ದಾಹ, ಎದ್ದು ಕಾಣುತ್ತಿರುವುದು ಹಾಗೂ ಇತರ ದೇಶಗಳು ಈ ಯುದ್ಧದಿಂದ ತನಗೇನು ಪ್ರಯೋಜನ? ಎಂದು ನೋಡುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ತೊಟ್ಟಿಲನ್ನು ತೂಗಬಲ್ಲವಳು ಜಗತ್ತನ್ನೇ ತೂಗಬಲ್ಲಳು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಇತರರನ್ನು ಮಹಿಳಾ ದಿನಾಚರಣೆಯ ನಿಮಿತ್ತ ಅವರ ಸಾಧನೆ ನೆನೆದರು. ಭಾಷಾವಾರು ಪ್ರಾಂತ್ಯಗಳ ವಿಲಿನದ ವೇಳೆ ಜತ್ತ, ಅಕ್ಕಲಕೋಟ್, ದಕ್ಷಿಣ ಸೋಲಾಪುರ್, ಅಧೋನಿ, ಮಡಕ್ ಶಿರಾ ಹಾಗೂ ಕಾಸರಗೋಡು ಕನ್ನಡದ ನೆಲಗಳು ಅಚ್ಚಗನ್ನಡ ಮಾತನಾಡುವ ನಮ್ಮ ಜನಗಳು ಗಡಿಯಾಚೆ ಉಳಿದು ಬಿಟ್ಟಿದ್ದು ಅತ್ಯಂತ ದುಃಖದ ಸಂಗತಿ. ಮಹಾಜನ್ ವರದಿ ಬೇಗ ಜಾರಿಗೆ ಬರಲಿ. ಕಳೆದು ಹೋದ ನಮ್ಮ ಜನ, ನಮ್ಮ ನೆಲ ಕರ್ನಾಟಕಕ್ಕೆ ಸೇರುವಂತಾಗಲಿ ಎಂದು ಆಶಿಸಿದರು.ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಭಾರತಿ ಅಲಿಬಾದಿ ದಂಪತಿಯನ್ನು ಸಾರೋಟದಲ್ಲಿ ಮೆರವಣಿಗೆ ಮೂಲಕ ಸಭಾಗೃಹಕ್ಕೆ ಕರೆತರಲಾಯಿತು. ವಿಜಯಪುರ ಜ್ಞಾನ ಯೋಗಶ್ರಮದ ಬಸವಲಿಂಗ ಸ್ವಾಮೀಜಿ ಹಾಗೂ ರಾಮದುರ್ಗದ ನಾಗನೂರು ಗುರುಬಸವ ಮಠದ ಬಸವ ಗೀತಾ ತಾಯಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುರುಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಮನೋಹರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬೆಳಗಾವಿ ಪಾಲಿಕೆ ಉಪ ಆಯುಕ್ತ ಉದಯಕುಮಾರ್.ಕೆ.ಟಿ ಸರ್ವಾಧ್ಯಕ್ಷರ ಪರಿಚಯ ಪುಸ್ತಕ ಬಿಡುಗಡೆಗೊಳಿಸಿದರು. ಈ ವೇಳೆ ರಾಮಲಿಂಗಪ್ಪ ಕಾಡಪ್ಪನವರ, ದೀಪ ಕುಡಚಿ, ರಾಜೇಂದ್ರವಾಲಿ, ಶ್ರೀರಂಗ ಜೋಶಿ, ಜಿ.ಎನ್.ಬಿರಾದಾರ್, ಅಣ್ಣಾಸಾಹೇಬ ತೆಲಸಂಗ, ಅನ್ನಪೂರ್ಣ ಪಾಟೀಲ ಸೇರಿ ಇತರರು ಆಗಮಿಸಿದ್ದರು. ಶಿವಲೀಲಾ ಪಟ್ಟಣಶೆಟ್ಟಿ ಸ್ವಾಗತಿಸಿದರು. ವನಿತಾ ರಾಜೇಶ್ ನಿರೂಪಿಸಿದರು. ಅಕ್ಕಮಹಾದೇವಿ ಪಾಟೀಲ್ ವಂದಿಸಿದರು.-----ಬಾಕ್ಸ್----
ಸರ್ಕಾರಕ್ಕೆ ಅಲಿಬಾದಿ ಹಕ್ಕೊತ್ತಾಯಗಳೇನು..?
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022 ಮಂಡಿಸಲಾಗಿದೆ. ಅದು ಎಲ್ಲ ಹಂತದಲ್ಲೂ ಜಾರಿಗೆ ಬರಲಿ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದೆ, ಆದರೆ ತಮಿಳು ಭಾಷೆಯಂತೆ ಭಾಷಾ ಬೆಳವಣಿಗೆಗೆ ಆರ್ಥಿಕ ಸಹಾಯ ಹೆಚ್ಚಿಗೆ ಸಿಗುವಂತಾಗಲಿ. ಸರ್ಕಾರದಿಂದ 500 ಗ್ರಂಥಗಳು ಸಗಟು ಖರೀದಿ ವ್ಯವಸ್ಥಿತವಾಗಿ ಪ್ರತಿವರ್ಷ ಜರುಗಲಿ. ಲೇಖಕರು ಪ್ರಕಾಶಕರು ಆರ್ಥಿಕವಾಗಿ ಸಬಲರಾಗಲಿ. ಸರೋಜಿನಿ ಮಹಿಷಿ ವರದಿ ಜಾರಿಗೆ ಬರಲಿ. ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇರಲಿ. ಪ್ರವಾಸೋದ್ಯಮ ಬೆಳೆಯಲಿ. ರಾಜ್ಯಗಳ ಗಡಿತಂಟೆ, ಜಲತಂಟೆ ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಬಗೆಹರಿಸಲಿ, ಅದಕ್ಕೊಂದು ಶಾಶ್ವತ ಆಯೋಗ ರಚಿಸಲಿ. ಕಿತ್ತೂರು ಕರ್ನಾಟಕಕ್ಕೆ ವಿಶೇಷ ಅನುದಾನ ಸಿಗುವಂತಾಗಲಿ. ಜಿಲ್ಲೆಯ ಕವಿ ಸಾಹಿತಿ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್, ಅಕಾಡೆಮಿ ಪ್ರಶಸ್ತಿ, ಅಕಾಡೆಮಿ ಸ್ಥಾನಮಾನಗಳು ದೊರೆಯಲಿ, ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಲ್ಲ ಕಚೇರಿಗಳು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬರಲಿ. ರೈತರಿಗೆ ನೀರು ಮಣ್ಣು ಪರೀಕ್ಷೆ, ಬೆಳೆ ಮಾಹಿತಿ, ಬೀಜ ರಸಗೊಬ್ಬರ ಕೀಟನಾಶಕಗಳು, ಯಂತ್ರೋಪಕರಣಗಳು ಹೋಬಳಿ ಮಟ್ಟದಲ್ಲಿ ದೊರೆಯುವಂತಾಗಲಿ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿ. ಅವರು ಕೂಡ ನೆಮ್ಮದಿಯ ಬದುಕನ್ನು ನಡೆಸಲಿ. ಪ್ರತಿ ಹೊಲ ಮನೆಗಳಲ್ಲಿ ಮಳೆ ಕೊಯ್ಲು ಕಡ್ಡಾಯವಾಗಲಿ, ಮಳೆ ಕೊಯ್ಲು ವಿಧಾನವನ್ನು ಪಠ್ಯದಲ್ಲಿ ಅಳವಡಿಸುವಂತಾಗಲಿ. ಹೋಬಳಿಗೊಬ್ಬ ಜಲತಜ್ಞ ಸರ್ಕಾರದಿಂದ ನಿಯೋಜನೆಗೊಂಡು ರೈತರಿಗೆ ಸುಲಭವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸುವಂತಾಗಲಿ ಎಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.------
ಕೋಟ್ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಒಂದರಿಂದ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಕಡ್ಡಾಯವಾಗಿ ಕನ್ನಡದಲ್ಲೇ ಆಗಬೇಕು. ಒಂದನೇ ತರಗತಿಯಿಂದ ಇಂಗ್ಲಿಷ್ ಒಂದು ಭಾಷೆಯನ್ನಾಗಿ ಬೋಧಿಸಬೇಕು. ಜಪಾನ್, ಜರ್ಮನಿ, ಚೀನಾ, ಫ್ರಾನ್ಸ್, ರಷ್ಯಾ ಮುಂತಾದ ದೇಶಗಳಂತೆ ಕನ್ನಡ ಭಾಷೆಯಲ್ಲಿಯೂ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಮತ್ತು ಉನ್ನತ ಶಿಕ್ಷಣ ಬೋಧಿಸಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಈಗ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಪಡಿಸಬೇಕಿದೆ.
- ಅಪ್ಪಾಸಾಹೇಬ ಅಲಿಬಾದಿ, ಅಖಿಲ ಭಾರತ ದ್ವಿತೀಯ ಕವಿಪೀಠ ಮಹಾಸಮ್ಮೇಳನದ ಸರ್ವಾಧ್ಯಕ್ಷರು