ಸಾರಾಂಶ
ರಾಣಿಬೆನ್ನೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯದಕ್ಷತೆಯಿಂದಾಗಿ ವಿಶ್ವದ ಬೆಳವಣಿಗೆಯ ನಾಯಕತ್ವ ಭಾರತ ದೇಶಕ್ಕೆ ಬಂದಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸ್ಟೇಷನ್ ರಸ್ತೆ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷವಾಗಿದ್ದು, ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಕಾರ್ಯವೈಖರಿಯಿಂದಾಗಿ ಬಡವರು ಬದುಕಿನ ಆಸೆಯನ್ನು ಬಿಟ್ಟಿದ್ದರು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಯಿತು. ಅವರು ದೇಶದ ಜನರ ಆಶಾಕಿರಣವಾಗಿ ಮೂಡಿ ಬಂದರು. ಮೋದಿ ಪ್ರಧಾನಿಯಾದ ನಂತರದಲ್ಲಿ ದೇಶದಲ್ಲಿ 13 ಕೋಟಿ ಮನೆತನಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. 12 ಕೋಟಿ ಶೌಚಾಲಯಗಳನ್ನು ಹಾಗೂ 4 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ರೈತರ ಖಾತೆಗೆ 14 ಸಾವಿರ ಕೋಟಿ ರು. ಬಂದಿದೆ. ಸ್ತ್ರೀಶಕ್ತಿ ಸಂಘಕ್ಕೆ ನೇರವಾಗಿ ಅನುದಾನ ಬಂದಿದೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ತ್ರಿಬಲ್ ತಲಾಖ್ ರದ್ದು ಮೂಲಕ ನೆಮ್ಮದಿ ಲಭಿಸಿದೆ. ಆಯುಷ್ಮಾನ ಭಾರತ ಮೂಲಕ 1 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವ ಸರ್ಕಾರವಾಗಿದೆ. ಯಾರೊಬ್ಬರಿಗೂ 200 ಯುನಿಟ್ ಉಚಿತವಾಗಿ ನೀಡಿಲ್ಲ. ಮಹಿಳೆಯರಿಗೆ ಉಚಿತ ಬಸ್ ಎನ್ನುತ್ತಾರೆ. ಆದರೆ ಅವುಗಳು ಕೆಟ್ಟು ನಿಂತಿವೆ, ವಿದ್ಯಾರ್ಥಿಗಳು ಶಾಲಾ, ಕಾಲೇಜಿಗಳಿಗೆ ತೆರಳಲು ಪರದಾಡುವಂತಾಗಿದೆ. ಅಭಿವೃದ್ಧಿಗೆ ಒಂದು ರು. ಅನುದಾನ ಇಲ್ಲ. ನಮ್ಮ ಕಾಲದಲ್ಲಿ ನಗರೋತ್ಥಾನ ಸೇರಿದಂತೆ ಜಾರಿಗೊಳಿಸಲಾದ ಯೋಜನೆಗಳು ನಡೆಯುತ್ತಿವೆ. ಕುಡಿಯಲು ನೀರು ಕೊಡದ ದರಿದ್ರ ಸರ್ಕಾರ ಆಡಳಿತ ಮಾಡುತ್ತಿದೆ. ಒಂದು ಲಕ್ಷ ಕೋಟಿ ಸಾಲ ಮುಖ್ಯಮಂತ್ರಿಯ ಸಾಧನೆಯಾಗಿದೆ. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದೊಂದಿಗೆ 1983ರಿಂದಲೂ ಸಂಪರ್ಕದಲ್ಲಿರುವೆ. ನೀರಾವರಿ ಸಚಿವನಾಗಿದ್ದಾಗ ತುಂಗಾ ಮೇಲ್ದಂಡೆ ಯೋಜನೆಯಲ್ಲಿನ ಅಡೆತಡೆಗಳನ್ನು ಪರಿಹರಿಸಿ ವಿಶೇಷವಾದ ತಂತ್ರಜ್ಞಾನದ ಬಳಕೆ ಮಾಡಿ ಯೋಜನೆ ಜಾರಿಗೆ ತರಲಾಯಿತು. ಇದರಿಂದಾಗಿ ತಾಲೂಕಿನ 1 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಲಭಿಸಿದೆ. ಬರುವ ದಿನಗಳಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೇಂದ್ರದ ಎಲ್ಲಾ ಯೋಜನೆಗಳನ್ನು ಹಾವೇರಿ-ಗದಗ ಜಿಲ್ಲೆಗಳಿಗೆ ತರುವೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುವೆ ಹಾಗೂ ಪ್ರಧಾನ ಮಂತ್ರಿಗಳ ಕೈ ಬಲಪಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕೆಲಸದ ಮೂಲಕ ಸಾಮಾಜಿಕ ಹರಿಕಾರ ಎನ್ನಿಸಿಕೊಂಡರು. ಪ್ರತಿಯೊಂದು ಸಮಾಜದ ಅಭ್ಯುದಯಕ್ಕೆ ಒತ್ತು ನೀಡಿದ್ದರು. ಹೀಗಾಗಿ ಅಭಿವೃದ್ಧಿ ಮೂಲಕ ಮತ ಯಾಚನೆ ಮಾಡುತ್ತಿದ್ದೇವೆ. ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ 30 ಸಾವಿರ ಲೀಡ್ ಕೊಡಿಸುತ್ತೇವೆ. ಅವರ ಆಯ್ಕೆ ಖಚಿತ. ಮುಂದೆ ಕೇಂದ್ರದಲ್ಲಿ ಹಣಕಾಸು ಸಚಿವರಾಗಿ ಇಲ್ಲಿಗೆ ಬರುವಂತಾಗಲಿ ಎಂದು ಹಾರೈಸಿದರು.ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ.ಪಾಟೀಲ, ಲೋಕಸಭಾ ಉಸ್ತುವಾರಿ ಹಾಗೂ ಶಾಸಕ ಅರವಿಂದ ಬೆಲ್ಲದ, ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ವಿರೂಪಾಕ್ಷಪ್ಪ ಬಳ್ಳಾರಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಮಾಜಿ ಸದಸ್ಯರಾದ ಸಂತೋಷಕುಮಾರ ಪಾಟೀಲ, ಶೋಭಾ ನಿಸ್ಸಿಮಗೌಡ್ರ, ಕಾರವಾರ ಜಿಲ್ಲಾ ಉಸ್ತುವಾರಿ ಭಾರತಿ ಜಂಬಗಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಕೆ. ಶಿವಲಿಂಗಪ್ಪ, ಭಾರತಿ ಅಳವಂಡಿ, ಪರಮೇಶ ಗೂಳಣ್ಣನವರ, ರಮೇಶ ಗುತ್ತಲ, ವ್ಹಿ.ಪಿ.ಲಿಂಗನಗೌಡ್ರ ಮತ್ತಿತರರಿದ್ದರು.
ಇದಕ್ಕೂ ಪೂರ್ವದಲ್ಲಿ ಲೋಕಸಭಾ ಅಭ್ಯರ್ಥಿಯಾದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷದ ಕಾರ್ಯಕರ್ತರು ನಗರದ ಮಾಗೋಡ ರಸ್ತೆ ಲಲಿತ ಭವನ ಬಳಿಯಿಂದ ಬೈಕ್ ರ‍್ಯಾಲಿ ಮೂಲಕ ಸಮಾರಂಭದ ಸ್ಥಳಕ್ಕೆ ಕರೆ ತಂದರು.