ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ಮಾನಸಿಕ ಅಸ್ವಸ್ಥತೆಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಗುಣಮುಖರಾಗಲು ಪ್ರಯತ್ನಿಸಬೇಕು. ಸಮಸ್ಯೆ ಉಲ್ಬಣಗೊಂಡ ಬಳಿಕ ಚಿಕಿತ್ಸೆ ಕೊಡಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಕುಟುಂಬದವರು ಹಾಗೂ ಸಮಾಜದ ಪ್ರತಿಯೊಬ್ಬರೂ ಜಾಗೃತಿವಹಿಸಬೇಕು ಎಂದು ನ್ಯಾಯಾಧೀಶ ಸಂತೋಷ ಕೊಠಾರಿ ತಿಳಿಸಿದರು.

ಪಟ್ಟಣದ ಸಮೀಪದ ಶಾಂತಿಪುರ ಗ್ರಾಮದಲ್ಲಿರುವ ನಿರಾಶ್ರಿತ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಚಿತ್ತಧಾಮದಲ್ಲಿ ಬೆಂಗಳೂರಿನ ಚಿತ್ತಪ್ರಕಾಶ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಮಾನಸಿಕ ಸಮಸ್ಯೆ ಎದುರಾದಾಗ ಅದನ್ನು ನಿರ್ಲಕ್ಷಿಸದೆ ಸೂಕ್ತ ವೈದ್ಯಕೀಯ ನೆರವು ಪಡೆಯಬೇಕು. ಮಾನಸಿಕ ಅಸ್ವಸ್ಥರ ಬಗ್ಗೆ ಸಮಾಜದಲ್ಲಿ ತಾರತಮ್ಯ ತೋರದೆ, ಅವರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಅವರಿಗೆ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸುವ ಮೂಲಕ ಸಹಜ ಜೀವನ ನಡೆಸಲು ನೆರವಾಗಬೇಕು ಎಂದು ಹೇಳಿದರು.

ವಕೀಲ ಡಾ.ಎಂ.ಎನ್. ರವಿಶಂಕರ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲೊಂದು ರೀತಿಯ ಮಾನಸಿಕ ಒತ್ತಡ ಅಥವಾ ತೊಂದರೆ ಎದುರಾಗಬಹುದು. ಅಂತಹ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾನಸಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕು. ಈ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಾನಸಿಕ ತಜ್ಞ ರಾಮಕೃಷ್ಣ ಮಾತನಾಡಿ, ಕೆಲವೊಮ್ಮೆ ಮಾನಸಿಕ ಅಸ್ವಸ್ಥತೆಯಿಂದ ಬಳಲುವ ವ್ಯಕ್ತಿಗಳನ್ನು ಅವರ ಕುಟುಂಬದವರೇ ಆರೈಕೆ ಮಾಡಲಾಗದ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ನೆರೆಹೊರೆಯವರು ಹಾಗೂ ಸಮಾಜದ ಕಾಳಜಿಯುಳ್ಳ ವ್ಯಕ್ತಿಗಳು ಅವರನ್ನು ಗುರುತಿಸಿ, ಸೂಕ್ತ ಆರೈಕೆ ಮತ್ತು ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಿತ್ತಧಾಮದಂತಹ ಪುನರ್ವಸತಿ ಕೇಂದ್ರಗಳಿಗೆ ಸೇರಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಮಾನವೀಯ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಗುಣಮುಖರಾದ ವ್ಯಕ್ತಿಗೆ ಹಸು ವಿತರಣೆ

ಕಾರ್ಯಕ್ರಮದ ಅಂಗವಾಗಿ ಚಿತ್ತಧಾಮದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಯೊಬ್ಬರಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶದಿಂದ ಜೀವನೋಪಾಯಕ್ಕಾಗಿ ಹಸುವೊಂದನ್ನು ವಿತರಿಸಲಾಯಿತು. ಚಿಕಿತ್ಸೆಯ ನಂತರ ವ್ಯಕ್ತಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಮರಳಲು ಇಂತಹ ನೆರವು ಮಹತ್ವದ್ದಾಗಿದೆ ಎಂಬ ಆಶಯ ವ್ಯಕ್ತವಾಯಿತು.

ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮನೋವೈದ್ಯ ಡಾ.ಬಿ.ಆರ್. ರವಿಶಂಕರರಾವ್, ವಕೀಲರ ಸಂಘದ ಅಧ್ಯಕ್ಷ ಆರ್. ನಾಗೇಶ್, ಲೋಕೇಶ್, ಶಿವಣ್ಣನಾಯಕ, ಮೋಹನ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ್, ಇನ್‌ ಸ್ಪೆಕ್ಟರ್ ಚಿಕ್ಕನಾಯಕ, ಪಿಚ್ಚಿಮುತ್ತು ಗೌಂಡರ್, ಚಿತ್ತಧಾಮದ ವ್ಯವಸ್ಥಾಪಕ ಮಹದೇವಸ್ವಾಮಿ, ಪಳನಿಸ್ವಾಮಿ, ಸುಧಾ, ಕಮಲಮ್ಮ ಹಾಗೂ ಶಿವಮ್ಮ, ಶ್ರುತಿ ಇದ್ದರು.