ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕೆಎಬಿಎಚ್ಐ) ಆಶ್ರಯದಲ್ಲಿ ವಿಶ್ವ ಭೌತಚಿಕಿತ್ಸೆಯ ದಿನಾಚರಣೆ ಅಂಗವಾಗಿ ಇಲ್ಲಿನ ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆಯಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕೆಎಬಿಎಚ್ಐ) ಆಶ್ರಯದಲ್ಲಿ ವಿಶ್ವ ಭೌತಚಿಕಿತ್ಸೆಯ ದಿನಾಚರಣೆ ಅಂಗವಾಗಿ ಇಲ್ಲಿನ ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆಯಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಿತು.ಕೆಎಬಿಎಚ್ಐ ನೋಡಲ್ ಅಧಿಕಾರಿ ಡಾ. ಲತಾ ನಾಯಕ್ ಉದ್ಘಾಟಿಸಿದರು. ನಂತರ ಅವರು ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ರೋಗ ನಿರ್ಣಯ ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿದರು. ಅಲ್ಲದೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಭೌತಚಿಕಿತ್ಸಕರ ಪಾತ್ರವನ್ನು ಶ್ಲಾಘಿಸಿದರು.ನಂತರ ಕೆಎಬಿಎಚ್ಐ ಕಾರ್ಯಕ್ರಮದ ಕುರಿತು ಹಾಗೂ ಪಾರ್ಶ್ವವಾಯು (ಸ್ಟ್ರೋಕ್) ತಡೆಗಟ್ಟುವಿಕೆ ಮತ್ತು ಹೃದಯರಕ್ತನಾಳದ ಆರೋಗ್ಯದ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಾಗಾರ ನಡೆಯಿತು.ಈ ಕಾರ್ಯಾಗಾರದಲ್ಲಿ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆ, ನಿರ್ವಹಣೆ ಮತ್ತು ಪುನರ್ವಸತಿಯಲ್ಲಿ ಭೌತಚಿಕಿತ್ಸಕರ ಮಹತ್ವದ ಪಾತ್ರದ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾಸ್ಪತ್ರೆಯಲ್ಲಿನ ಬ್ರೈನ್ ಹೆಲ್ತ್ ಕ್ಲಿನಿಕ್‌ನ ಸಿಬ್ಬಂದಿ ಹಾಗೂ ದೊರಕುವ ಸೌಲಭ್ಯಗಳ ಬಗ್ಗೆ ಜಿಲ್ಲಾ ಸಂಯೋಜಕಿ ಅರ್ಪಿತಾ ಬ್ರಹ್ಮಾವರ, ಭೌತಚಿಕಿತ್ಸಕರು ಯಶಸ್ವಿನಿ ವಿ. ಹಾಗೂ ಹೇಮಾ ಪಿ. ಅವರು ಮಾಹಿತಿ ನೀಡಿದರು.ಜಾಗೃತಿ ಮೂಡಿಸಲು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ಭೌತಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯುಕ್ತ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕ ಸಂತೋಷ ನಿರೂಪಿಸಿದರು, ಅರ್ಪಿತಾ ಬ್ರಹ್ಮಾವರ ಸ್ವಾಗತಿಸಿ ವಂದಿಸಿದರು.