ಬಿಜೆಪಿ ದೆಸೆಯಿಂದ ದುರ್ಗಕ್ಕೆ ವಿಶ್ವ ಮನ್ನಣೆ: ಮಾಜಿ ಸಂಸದ ಜನಾರ್ದನಸ್ವಾಮಿ

| Published : Mar 25 2024, 12:49 AM IST

ಬಿಜೆಪಿ ದೆಸೆಯಿಂದ ದುರ್ಗಕ್ಕೆ ವಿಶ್ವ ಮನ್ನಣೆ: ಮಾಜಿ ಸಂಸದ ಜನಾರ್ದನಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಸಂಸದ ಜನಾರ್ದನಸ್ವಾಮಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಬದಿಗೆ ಸರಿಸಿ ಚಿತ್ರದುರ್ಗ ಜಿಲ್ಲೆಯನ್ನು ವಿಶ್ವವೇ ಗುರುತಿಸುವಂತೆ ಮಾಡುವಲ್ಲಿ ಬಿಜೆಪಿ ಪರಿಶ್ರಮ ಹೆಚ್ಚಿದೆ ಎಂದು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಹಲವಾರು ದಶಕಗಳಿಂದ ರಾಜ್ಯದ ಹಿಂದುಳಿದ ಜಿಲ್ಲೆಯೆಂದೇ ಕರೆಯಲಾಗುತ್ತಿದ್ದ ಚಿತ್ರದುರ್ಗ ಜಿಲ್ಲೆಯನ್ನು ಇಂದು ವಿಶ್ವವೇ ಗುರುತಿಸುವಂತೆ ಮಾಡುವಲ್ಲಿ ಬಿಜೆಪಿ ಪರಿಶ್ರಮ ಹೆಚ್ಚಿದೆ. ವಿಶೇಷವಾಗಿ ೨೦೦೯ರಲ್ಲಿ ಡಿಆರ್‌ಡಿಒ, ಐಐಎಸ್ಸಿ, ಬಾಬಾ ಅಣು ಸಂಶೋಧನಾ ಕೇಂದ್ರ, ಬಾರ್ಕ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಾರಂಭಕ್ಕೆ ನಾಂದಿಯಾಡಲಾಗಿದೆ ಎಂದು ಮಾಜಿ ಸಂಸದ ಜನಾರ್ದನಸ್ವಾಮಿ ತಿಳಿಸಿದರು.

ಅವರು, ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದುಳಿದ ಜಿಲ್ಲೆಯ ಹಣೆಪಟ್ಟಿಯನ್ನು ಬದಿಗೆ ಸರಿಸಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿ ಜಿಲ್ಲೆಯಾಗಿ ಹೊರಹೊಮ್ಮುವಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಪಾತ್ರ ಹೆಚ್ಚಿದೆ ಎಂದರಲ್ಲದೆ, ೨೦೧೪ರಲ್ಲಿ ಈ ಯೋಜನೆಗಳ ಪೂರ್ಣ ಪ್ರಮಾಣದ ಫಲ ನಮಗೆ ದೊರೆಯಲಿಲ್ಲ. ನನಗೂ ಸಹ ಆ ಸಂದರ್ಭದಲ್ಲಿ ಸ್ಪರ್ಧಿ ಸಲು ಸಾಧ್ಯವಾಗಲಿಲ್ಲ. ಆದರೆ, ಇಂದು ವಿಶ್ವವೇ ಮೆಚ್ಚುವಂತಹ ತಾಂತ್ರಿಕ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ನನಸು ಮಾಡಲು ಮತ್ತೊಮ್ಮೆ ಈ ಕ್ಷೇತ್ರದಿಂದ ಪಕ್ಷ ಅವಕಾಶ ಮಾಡಿಕೊಟ್ಟರೆ ನಾನು ಸ್ಪರ್ಧಿಸುವುದಾಗಿ ತಿಳಿಸಿದರಲ್ಲದೆ, ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸಿ ಜಯ ಸಾಧಿಸುವ ವಿಶ್ವಾಸವಿದೆ ಎಂದರು.

ರಾಷ್ಟ್ರದ ಮೊಟ್ಟ ಮೊದಲ ಐಐಎಸ್ಸಿ ಕೇಂದ್ರ ೧೨೦ ಎಕರೆ ಪ್ರದೇಶದಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ಪ್ರೊ.ಸಿ.ವಿ.ರಾಮನ್ ಅದರ ಸಂಸ್ಥಾಪಕರಾಗಿದ್ದರು. ಈಗ ಚಳ್ಳಕೆರೆಯಲ್ಲಿ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಐಐಎಸ್ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಡಿಆರ್‌ಡಿಒ, ಬಾಬಾ ಅಣುಸಂಶೋಧನಾ ಕೇಂದ್ರ ಸುಮಾರು ಎರಡು ಸಾವಿರ ಎಕರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ೨೦೦೯ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೩೫೦೦ ಕೋಟಿ ಹಣ ನೀಡಿ ಈ ಯೋಜನೆ ಜಾರಿಗೆ ಸಹಕಾರ ನೀಡಿದ್ದರು. ನೇರ ರೈಲು ಮಾರ್ಗ ಯೋಜನೆಗೆ ೮ ಸಾವಿರ ಕೋಟಿ ನೀಡಿ ದ್ದರು. ಇಡೀ ದೇಶದ ರಕ್ಷಣಾ ಜವಾಬ್ದಾರಿಯನ್ನು ಹೊತ್ತಿರುವ ಡಿಆರ್‌ಡಿಒ ಕೇಂದ್ರ ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ವಿಷಯ. ಮಾಜಿ ಸಂಸದ ಎನ್.ವೈ.ಹನುಮಂತಪ್ಪನವರು ಸಹ ಇದಕ್ಕೆ ಸಹಕರಿಸಿದ್ದರು ಎಂದು ನೆನೆದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಡಿ.ಸೋಮಶೇಖರ್ ಮಂಡಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ, ಟಿ.ಮಂಜುನಾಥ, ಸಿ.ಎಸ್.ಪ್ರಸಾದ್, ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಈಶ್ವರ ನಾಯಕ, ಜೆ.ಕೆ.ತಿಪ್ಪೇಶ್, ಟಿ.ತಿಪ್ಪಮ್ಮ, ವೆಂಕಟಪ್ಪ, ಪಾವಗಡ ರಂಗಣ್ಣ, ಕೆ.ವಿ.ಶ್ರೀನಿವಾಸ್‌ಮೂರ್ತಿ, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಅಂದಿನ ಯುಪಿಎ ಸರ್ಕಾರ ಸಹಕಾರವೂ ಇತ್ತು

೨೦೦೯ ರಿಂದ ೨೦೧೪ವರೆಗೆ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊಟ್ಟಮೊದಲ ಸಂಸದ ನಾನಾಗಿದ್ದು, ಅಂದು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದರೂ ಅಂದಿನ ಕೇಂದ್ರ ಸರ್ಕಾರ ಸಹಕಾರದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಮಟ್ಟದ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸಾಧ್ಯವಾಯಿತು.