ಕಾಶ್ಮೀರದ ಕಣಿವೆ ಮತ್ತು ಲಡಾಕ್ ನಡುವೆ ವರ್ಷದ ಎಲ್ಲಾ ದಿನಗಳಲ್ಲೂ ರಸ್ತೆ ಸಂಪರ್ಕ ಸಾಧಿಸುವ ಮಹತ್ವದ ಮೈಲಿಗಲ್ಲು ಯೋಜನೆ ‘ಜೋಜಿಲಾ ಸುರಂಗ’ದ ಕೊನೆಯ 2.5 ಮೀಟರ್ ಬಂಡೆಯನ್ನು ಮಂಗಳವಾರ ಸ್ಫೋಟಿಸುವ ಮೂಲಕ ಛೇದಿಸಲಾಯಿತು.
ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಶ್ರೀನಗರಕಾಶ್ಮೀರದ ಕಣಿವೆ ಮತ್ತು ಲಡಾಕ್ ನಡುವೆ ವರ್ಷದ ಎಲ್ಲಾ ದಿನಗಳಲ್ಲೂ ರಸ್ತೆ ಸಂಪರ್ಕ ಸಾಧಿಸುವ ಮಹತ್ವದ ಮೈಲಿಗಲ್ಲು ಯೋಜನೆ ‘ಜೋಜಿಲಾ ಸುರಂಗ’ದ ಕೊನೆಯ 2.5 ಮೀಟರ್ ಬಂಡೆಯನ್ನು ಮಂಗಳವಾರ ಸ್ಫೋಟಿಸುವ ಮೂಲಕ ಛೇದಿಸಲಾಯಿತು.
ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಪರವಾಗಿ ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(ಎಂಇಐಎಲ್) ಕೈಗೊಂಡಿರುವ ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಿಮೋಟ್ ಬಟನ್ ಒತ್ತುವ ಮೂಲಕ ಲಡಾಖ್ ಕೇಂದ್ರಾಡಳಿತ ಪ್ರದೇಶದ ಮಿನಿಮಾರ್ಗ್‌ನಲ್ಲಿರುವ ಸುರಂಗದ ಪೂರ್ವ ಪೋರ್ಟಲ್ ಬಳಿಯ ಬೆಸುಗೆ ಸ್ಥಳ ಸ್ಫೋಟಿಸಿದರು.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿಯಾದರು.ಶೇ.85ರಷ್ಟು ಪೂರ್ಣ:
ಒಟ್ಟು 13.153 ಕಿ.ಮೀ. ಉದ್ದದ ಏಕ ಕೊಳವೆಯ ದ್ವಿಮುಖ ಸಂಚಾರದ ಈ ಸುರಂಗ ನಿರ್ಮಾಣ ಕಾರ್ಯ ಶೇ.85ರಷ್ಟು ಪೂರ್ಣಗೊಂಡಿದ್ದು, ಈವರೆಗಿನ ಕಾಮಗಾರಿಯನ್ನು ಅವಧಿಗಿಂತ 6 ತಿಂಗಳು ಮೊದಲೇ ಪೂರ್ಣಗೊಳಿಸಲಾಗಿದೆ. ಸಿವಿಲ್ ಕೆಲಸಗಳು, ವಿದ್ಯುತ್ ಸಂಪರ್ಕ ಕಾರ್ಯ ಸೇರಿ ಉಳಿದ ಕಾಮಗಾರಿಯನ್ನು 2028ರ ಫೆಬ್ರವರಿ ವೇಳೆಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಪ್ರಯತ್ನಿಸುವುದಾಗಿ ಎನ್‌ಎಚ್‌ಐಡಿಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.ಕಾಶ್ಮೀರದಿಂದ ಲಡಾಖ್‌ಗೆ ಕಣಿವೆ ಅಂಚಿನ ದುಸ್ತರ, ಕಿರಿದಾದ ರಸ್ತೆಯಲ್ಲಿ 1.5 ಗಂಟೆ ಪ್ರಯಾಣ ಮಾಡಬೇಕಿದ್ದ ಸಮಯ ಈ ಯೋಜನೆಯಿಂದ ಕೇವಲ 15 ನಿಮಿಷಗಳಿಗೆ ಇಳಿಯಲಿದೆ. ಜತೆಗೆ ಎಲ್ಲಾ ಹವಾಮಾನದ ಸಮಯದಲ್ಲೂ ಈ ಮಾರ್ಗ ಸುರಕ್ಷಿತವಾಗಿರಲಿದೆ.
-ಬಾಕ್ಸ್-ಹೇಗಿದೆ ಸುರಂಗ?
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸುರಂಗ 9.5 ಮೀಟರ್ ಅಗಲ, 7.57 ಮೀಟರ್ ಎತ್ತರ, 13.153 ಕಿ.ಮೀ ಉದ್ದವಿದ್ದು, ಕುದುರೆ ಲಾಳ ಆಕಾರದ ಏಕ-ಕೊಳವೆ ಮಾರ್ಗವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದ್ದು ದ್ವಿಪಥ ರಸ್ತೆಯಿಂದ ಕೂಡಿದೆ.ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಮೇಘಾ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಲಿಮಿಟೆಡ್ (ಎಂಇಐಎಲ್) ಹಿಮಾಲಯವನ್ನು ಭೇದಿಸಲು ಮತ್ತು ಅದರೊಳಗೆ ಸಂಚರಿಸಲು ನ್ಯೂ ಆಸ್ಟ್ರಿಯನ್ ಸುರಂಗ ವಿಧಾನವನ್ನು (ಎನ್ಎಟಿಎಂ) ಬಳಸಿದೆ. ಸೋನ್‌ಮಾರ್ಗ್‌ನಿಂದ ಮಿನಿಮಾರ್ಗ್‌ವರೆಗಿನ ಸಂಪರ್ಕ ರಸ್ತೆ ಮತ್ತು ಸೇತುವೆಗಳು ಸೇರಿ ಇಡೀ ಯೋಜನೆಯು 31 ಕಿ.ಮೀ. ಉದ್ದವಿದೆ.-ಬಾಕ್ಸ್-
ಮಿಲಿಟರಿ ಸಂಚಾರಕ್ಕೆ ಅನುಕೂಲ,ಭದ್ರತೆ ಬಲವರ್ಧನೆಗೆ ರಹದಾರಿ
ಹಿಮಾಲಯದ ಅಪಾಯಕಾರಿ ಝೋಜಿಲಾ ಮಾರ್ಗದಲ್ಲಿ ಸಾಮಾನ್ಯವಾಗಿ ಭಾರೀ ಹಿಮಪಾತದಿಂದಾಗಿ ವರ್ಷದಲ್ಲಿ ಚಳಿಗಾಲದ ಮೂರು ತಿಂಗಳ ಕಾಲ ಸಂಚಾರ ನಿರ್ಬಂಧಿಸಲಾಗುತ್ತದೆ. ಒಮ್ಮೆ ಈ ಸುರಂಗ ಸಂಚಾರಕ್ಕೆ ಮುಕ್ತಗೊಂಡರೆ ನಮ್ಮ ಮಿಲಿಟರಿ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಗಡಿಗೆ ತಕ್ಷಣಕ್ಕೆ ಮಿಲಿಟರಿ ರವಾನೆ ಸುಲಭವಾಗಲಿದೆ.ಅಲ್ಲದೆ. ಈ ಯೋಜನೆಯಿಂದ ಪ್ರವಾಸೋದ್ಯಮ, ವ್ಯಾಪಾರ, ಅಗತ್ಯ ಸೇವೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಗೆ ಭಾರೀ ಉತ್ತೇಜನ ಸಿಗಲಿದೆ.-ಬಾಕ್ಸ್-
ಐತಿಹಾಸಿಕ ದಿನ, ಜೋಜಿಲಾವಿಶ್ವ ದಾಖಲೆಗೆ: ನಿತಿನ್ ಗಡ್ಕರಿ
ಸುರಂಗದ ಪೂರ್ವ ಪೋರ್ಟಲ್ ಬಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಭಾರತದ ಮೂಲಸೌಕರ್ಯ ಇತಿಹಾಸದಲ್ಲೇ ಇದು ಐತಿಹಾಸಿಕ ದಿನ. ಜೋಜಿಲಾ ಸುರಂಗ ಪೂರ್ಣಗೊಂಡ ಬಳಿಕ ವಿಶ್ವದಾಖಲೆ ನಿರ್ಮಿಸಲಿದೆ. ಇದು ಲಡಾಖ್ ಮತ್ತು ಜಮ್ಮು-ಕಾಶ್ಮೀರದ ಜನರಿಗೆ ಜೀವನಾಡಿಯಾಗಲಿದೆ ಎಂದು ಹೇಳಿದರು.ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಹಗಲಿರುಳು ಶ್ರಮಿಸಿ ಈ ಸುರಂಗ ನಿರ್ಮಾಣದ ಸಾಧನೆ ಮಾಡಿದ್ದಾರೆ. ಯೋಜನೆಯಲ್ಲಿ ಶೇ.80ರಷ್ಟು ಸ್ಥಳೀಯರು ಕೆಲಸ ನಿರ್ವಹಿಸಿರುವುದು ವಿಶೇಷ ಎಂದು ಹರ್ಷ ವ್ಯಕ್ತಪಡಿಸಿದರು.
ಹಲವು ಸಂಕೀರ್ಣ ಪರಿಸ್ಥಿತಿಯಲ್ಲೂ ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಪೂರೈಸಿರುವ ಎಂಇಐಎಲ್ ಕಾರ್ಯಕಾರಿ ನಿರ್ದೇಶಕ ಕೃಷ್ಣರೆಡ್ಡಿ ಮತ್ತು ಯೋಜನಾ ವ್ಯವಸ್ಥಾಪಕ ಹರ್‌ಪಾಲ್ ಸಿಂಗ್ ಅವರ ಕಾರ್ಯವೈಖರಿಯನ್ನು ಇದೇ ವೇಳೆ ಕೇಂದ್ರ ಸಚಿವ ಶ್ಲಾಘಿಸಿದರು.ಆರಂಭದಲ್ಲಿ ಯೋಜನೆಗೆ ₹12 ಸಾವಿರ ಕೋಟಿ ವ್ಯಯಿಸುವ ಡಿಪಿಆರ್ ಸಿದ್ದಪಡಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದರೂ ಕಾರ್ಯಸಾಧುವಾಗಿರಲಿಲ್ಲ, ನಂತರ ಎಂಇಐಎಲ್ ಕಡಿಮೆ ಮೊತ್ತಕ್ಕೆ ಕಾಮಗಾರಿ ಕೈಗೊಂಡ ಪರಿಣಾಮ ಸರ್ಕಾರ ಅಂದಾಜು ₹4 ಸಾವಿರ ಕೋಟಿ ಉಳಿಸುವಂತಾಯಿತು ಎಂದರು.-ಕೋಟ್-
ಲಡಾಖ್ ಮತ್ತು ಜಮ್ಮು-ಕಾಶ್ಮೀರ ಜನರ ಬಹುಕಾಲದ ಕನಸು ನನಸಾಗಿದೆ. ಉತ್ತಮ ಸಾರಿಗೆ, ಪ್ರವಾಸೋದ್ಯಮ ಮತ್ತು ಹೊಸ ಆರ್ಥಿಕ ಅವಕಾಶಗಳ ಮೂಲಕ ಈ ಸುರಂಗ ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ.- ಒಮರ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ