ಶ್ರೀಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯವರು ಭಾರತೀಯ ಸಂತ ಪರಂಪರೆಯ ಪ್ರಕಾಶಮಾನವಾದ ಸ್ತಂಭವಾಗಿದ್ದರು. ಅವರ ಇಡೀ ಜೀವನವು ಕರುಣೆ, ತ್ಯಾಗ, ಕಠಿಣತೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಮಾನವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವುದು ಅವರ ಮೂಲ ಉದ್ದೇಶವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ವಿಶ್ವದ ಹಲವಾರು ದೇಶಗಳು ಆಧ್ಯಾತ್ಮಿಕತೆ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ದೃಷ್ಟಿ ಹರಿಸಿವೆ. ನಮ್ಮ ಸಂಸ್ಕೃತಿಯು ಎಂದೆಂದೂ ಸಾರ್ವತ್ರಿಕ, ಸಹೋದರತ್ವ, ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಿಸಿದರು.

ಶ್ರೀಸುತ್ತೂರು ಮಹಾಸಂಸ್ಥಾನ ಮಠದಿಂದ ಮಳವಳ್ಳಿ ಪಟ್ಟಣದಲ್ಲಿ ನಡೆದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿ ಮಹಾ ಸ್ವಾಮೀಜಿಯವರ ೧೦೬೬ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸುತ್ತೂರು ಮಠವು ಧರ್ಮನಿಷ್ಠೆ ಮತ್ತು ಶಕ್ತಿಯ ತಾಣ. ದೇಶದ ಅತ್ಯಂತ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ. ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಮಠವು ಸಾಮಾಜಿಕ ಮತ್ತು ಧಾರ್ಮಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬಣ್ಣಿಸಿದರು.

ಶ್ರೀಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯವರು ಭಾರತೀಯ ಸಂತ ಪರಂಪರೆಯ ಪ್ರಕಾಶಮಾನವಾದ ಸ್ತಂಭವಾಗಿದ್ದರು. ಅವರ ಇಡೀ ಜೀವನವು ಕರುಣೆ, ತ್ಯಾಗ, ಕಠಿಣತೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಮಾನವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವುದು ಅವರ ಮೂಲ ಉದ್ದೇಶವಾಗಿತ್ತು ಎಂದರು.

ಶಿವಯೋಗಿಗಳು ಆತ್ಮಸಾಕ್ಷಾತ್ಕಾರ, ಶಿಸ್ತು ಮತ್ತು ಸೇವೆಯನ್ನು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರು. ಜಾತಿ, ವರ್ಗ ಮತ್ತು ಪಂಥದ ಆಧಾರದ ಮೇಲೆ ಸಂಕುಚಿತ ವ್ಯತ್ಯಾಸಗಳನ್ನು ಮೀರಿ ಸಮಾಜಕ್ಕೆ ಏಕತೆ, ಸಮಾನತೆ ಮತ್ತು ಸಾಮರಸ್ಯದ ಸಂದೇಶವನ್ನು ಬೋಧಿಸಿದರು. ಅವರ ಆಲೋಚನೆಗಳು ಮತ್ತು ಸಂದೇಶಗಳು ಆಂತರಿಕ ಶುದ್ಧತೆ, ಸಂಯಮ ಮತ್ತು ಕರುಣೆಯಿಂದ ಪ್ರೇರಿತವಾದಾಗ ಮಾತ್ರ ಬಾಹ್ಯ ಪ್ರಗತಿ ಅರ್ಥಪೂರ್ಣವಾಗಿರುತ್ತದೆ ಎಂದು ವಿವರಿಸಿದರು.

ಮಠದ ಪ್ರಸ್ತುತ ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರು ತಮ್ಮ ಗುರು ಪರಂಪರೆಯ ದೃಷ್ಟಿಕೋನ ಮತ್ತು ಸದ್ಭಾವನೆಯಿಂದ ಮಠದ ಶ್ರೇಷ್ಠ ಪರಂಪರೆ ಮತ್ತು ಪ್ರಯತ್ನಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಮಠದ ಸೇವಾ ಮನೋಭಾವ ಮತ್ತು ಖ್ಯಾತಿಯನ್ನು ಜಾಗತಿಕ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾದ ಆಧುನಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ದೇಶ ಮತ್ತು ವಿದೇಶಗಳಲ್ಲಿ ೩೫೦ ಕ್ಕೂ ಹೆಚ್ಚು ಶಿಕ್ಷಣ ಮತ್ತು ಇತರ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.

45 ನಿಮಿಷದಲ್ಲಿ ಮುಗಿದ ವೇದಿಕೆ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಸುತ್ತೂರು ಮಹಾಸಂಸ್ಥಾನ ಮಠದ ವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ಆಯೋಜನೆಗೊಂಡಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಉದ್ಘಾಟಿಸಿದರು.

ಮಧ್ಯಾಹ್ನ 3 ಗಂಟೆ ಸಮಯಕ್ಕೆ ಮಾರೇಹಳ್ಳಿಯ ಹೆಲಿಪ್ಯಾಡ್‌ಗೆ ಬಂದಿಳಿದ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಜರಿದ್ದರು.

ಮಧ್ಯಾಹ್ನ 3.20ಕ್ಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ ರಾಷ್ಟ್ರಪತಿಗಳು ವೇದಿಕೆ ಬಳಿ ನಿರ್ಮಿಸಿದ್ದ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸುತ್ತೂರು ಶ್ರೀಗಳು ಹಾಗೂ ಗಣ್ಯರೊಂದಿಗೆ ಫೋಟೋಶೂಟ್ ನಡೆಸಿದರು.

ಸುಮಾರು 3.35ಕ್ಕೆ ವೇದಿಕೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೆರದಿದ್ದ ಜನಸ್ತೋಮಕ್ಕೆ ಕೈಮುಗಿದು ನಮಸ್ಕರಿಸಿದರು. ತಮ್ಮ ಆಸನದ ಬಳಿ ತೆರಳುತ್ತಿದ್ದಂತೆ ವೇದಿಕೆ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರ ಗೀತೆ ನುಡಿಸುವ ಮೂಲಕ ರಾಷ್ಟ್ರಪತಿಯವರಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಧಾರ್ಮಿಕ ಕಾರ್ಯಕ್ರಮವಾಗಿದ್ದರಿಂದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ರಾಷ್ಟ್ರಪತಿ ಆಗಮನಕ್ಕೂ ಮುನ್ನ ವೇದಿಕೆ ಏರಿದ ಮೆಟ್ಟಿಲುಗಳ ಪಕ್ಕದಲ್ಲೇ ಶೂಗಳನ್ನು ಬಿಟ್ಟು ಬಂದು ಆಸೀನರಾಗಿದ್ದರು. ಇದನ್ನು ಕಂಡ ಎಸ್‌ಪಿಜಿ ತಂಡದವರು ಮತ್ತೆ ಅವರನ್ನು ಶೂ ಹಾಕಿಕೊಳ್ಳುವಂತೆ ಹೇಳಿದಾಗ ಎದ್ದು ಹೋಗಿ ಶೂ ಹಾಕಿಕೊಂಡು ಬಂದು ಮತ್ತೆ ಆಸೀನರಾದರು.

ರಾಷ್ಟ್ರಪತಿಗಳು ಕಾರ್ಯಕ್ರಮ ಸ್ಥಳಕ್ಕೆ ಬರುವ ಸಮಯದಲ್ಲೂ ಭದ್ರತೆಗೆ ರಸ್ತೆಯುದ್ದಕ್ಕೂ ನಿಂತಿದ್ದ ಪೊಲೀಸರು ರಾಷ್ಟ್ರಪತಿಗಳು ಕಾರಿನಲ್ಲಿ ಸಾಗುವ ಹಾದಿಗೆ ಮುಖ ಮಾಡಿ ನಿಲ್ಲದೆ, ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದ್ದರು. ರಾಷ್ಟ್ರಪತಿಗಳು ಬರುವವರೆಗೂ ಎಸ್‌ಪಿಜಿ ಹಾಗೂ ಪೊಲೀಸರು, ಅಧಿಕಾರಿ ವರ್ಗದವರು ವೇದಿಕೆ ಮೇಲಿಟ್ಟಿರುವ ವಸ್ತುಗಳಿಂದ ಹಿಡಿದು ಎಲ್ಲವನ್ನು ಸಮಗ್ರವಾಗಿ ಪರಿಶೀಲನೆ ನಡೆಸುತ್ತಲೇ ಇದ್ದುದು ಕಂಡುಬಂದಿತು.

ರಾಷ್ಟ್ರಪತಿಗಳ ಜೊತೆ ಆಗಮಿಸಿದ ಅಧಿಕಾರಿ ವರ್ಗದವರಿಗೆ, ವಿವಿಧ ಮಠಾಧೀಶರುಗಳಿಗೆ ವೇದಿಕೆ ಮುಂಭಾಗ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಮೇಲೆ ರಾಷ್ಟ್ರಪತಿ ಸೇರಿದಂತೆ ಏಳು ಜನರಿಗೆ ಮಾತ್ರ ಕೂರುವುದಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಭಾಷಣಕ್ಕೆ ಸೀಮಿತ ಸಮಯವನ್ನು ನಿಗದಿಪಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲರಿಗೂ ನಮಸ್ಕರಿಸಿ ಅಲ್ಲಿಂದ ನಿರ್ಗಮಿಸಿದರು. ಕೇವಲ 45 ನಿಮಿಷದಲ್ಲಿ ಇಡೀ ಸಮಾರಂಭ ಸಮಾಪ್ತಿಗೊಂಡಿತು.