ಸಾರಾಂಶ
ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪಾರುಪತ್ತೆದಾರ ಮಹಾಲಿಂಗನ ಕಟ್ಟೆ ಮಹಾದೇವಸ್ವಾಮಿ ತಿಳಿಸಿದರು.
ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರದ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಹಾಗೂ ಜಾತ್ರಾ ಮಹೋತ್ಸವ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಈ ವೇಳೆ ಬರುವಂತಹ ಭಕ್ತಾದಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಪ್ರಾಧಿಕಾರದ ಜೊತೆ ಕೈಜೋಡಿಸಬೇಕು ಎಂದರು. ಪ್ರಾಧಿಕಾರದ ವತಿಯಿಂದ ಕಸ ಕಡ್ಡಿ ಹಾಗೂ ತ್ಯಾಜ್ಯ ಪದಾರ್ಥಗಳನ್ನು ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಂದರಲ್ಲಿ ಕಸ ಕಡ್ಡಿಗಳನ್ನು ಬಿಸಾಡಬಾರದು. ದೇವಾಲಯದ ಆವರಣದಲ್ಲಿ ಭಕ್ತಾದಿಗಳು ಉರುಳು ಸೇವೆ ಮಾಡುತ್ತಾರೆ. ಇಂತಹ ಭಕ್ತಾದಿಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು, ಕಸ ಕಡ್ಡಿಗಳು ಬಿದ್ದಿದ್ದರೆ ತಾವೇ ಸ್ವಯಂ ಪ್ರೇರಿತವಾಗಿ ತೆರವು ಮಾಡಬೇಕು ಹಾಗಾದರೆ ಮಾತ್ರ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಗಮಿಕ ಕರವೀರ ಸ್ವಾಮಿ, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಪ್ರವಾಸಿ ಮಿತ್ರ ಸಿಬ್ಬಂದಿ ಹಾಜರಿದ್ದರು.