ಸಾರಾಂಶ
ತೆಕ್ಕಟ್ಟೆಯಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಇದೇ ಸಂದರ್ಭದಲ್ಲಿ ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರವನ್ನು ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಅವರಿಗೆ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕೋಟ
ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾಳೆ. ಇದಕ್ಕೆ ಇತ್ತೀಚಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯೇ ಸಾಕ್ಷಿ ಎಂದು ಗೋಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್ ಹೇಳಿದರು.ಅವರು ಇಲ್ಲಿನ ತೆಕ್ಕಟ್ಟೆಯಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುರುಷರು ನಡೆಸುವ ಚಾಲಕ ವೃತ್ತಿಯಲ್ಲಿಯೂ ನಿರತರಾಗಿರುವ ಮಹಿಳೆ, ತ್ಯಾಜ್ಯ ವಿಲೇವಾರಿಯಂತಹ ಕ್ಲಿಷ್ಟಕರ ಕಾರ್ಯದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಇಂತಹ ಮಹಿಳೆಯರಿಗೆ ಪ್ರೋತ್ಸಾಹ ನಿತ್ಯನಿರಂತರವಾಗಿ ಸಂಘಸಂಸ್ಥೆಗಳು, ಸರ್ಕಾರಗಳು ನೀಡಬೇಕು ಎಂದರಲ್ಲದೇ, ಪಂಚವರ್ಣ ಸಂಸ್ಥೆಯ ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರವನ್ನು ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಅವರಿಗೆ ಪ್ರದಾನ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತೆಕ್ಕಟ್ಟೆ ಗ್ರಾ.ಪಂ. ಸದಸ್ಯೆ ಪ್ರತಿಮಾ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ಉಪಸ್ಥಿತರಿದ್ದರು.ಸನ್ಮಾನ ಪತ್ರವನ್ನು ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತಾ ಬಾಯರಿ ನಿರ್ವಹಿಸಿದರು. ಕೋಶಾಧಿಕಾರಿ ಸುಜಾತಾ ಉದಯ ತಿಂಗಳಾಯ ವಂದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.